ಶನಿವಾರ, ಮಾರ್ಚ್ 25, 2023
30 °C

ಗಣೇಶೋತ್ಸವ: ಮುಂದುವರಿದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಭಾನುವಾರವೂ ಗೊಂದಲ ಮುಂದುವರಿಯಿತು. ಮೂರ್ತಿಗಳ ವಿಸರ್ಜನೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಮೂರನೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಗಣೇಶೋತ್ಸವ ಸಮಿತಿಗಳು ಸಿದ್ಧತೆ ಮಾಡಿಕೊಂಡಿದ್ದವು. ಆದರೆ, ಈ ನಿಟ್ಟಿನಲ್ಲಿ ಸಂಘ- ಸಂಸ್ಥೆಗಳಿಗೆ ಅನುಮತಿ ಪಡೆಯುವುದಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿದಿಲ್ಲ.

‘ಮೂರ್ತಿ ವಿಸರ್ಜನೆಗೆ ಆಯಾ ವಾರ್ಡ್‌ನಲ್ಲಿ ಎಲ್ಲೆಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿಯು ಸರಿಯಾಗಿ ಸಿಗುತ್ತಿಲ್ಲ. ಮೂರ್ತಿಗಳ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಗೊಂದಲಗಳು ಮುಂದುವರಿದಿವೆ’ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಬಡಾವಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದೆವು. ಈ ಬಾರಿ ಕೇವಲ ಒಂದೆರಡು ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸುವಂತಾಗಿದೆ’ ಎಂದರು. 

ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳ ತಂಡವು ಹೆಬ್ಬಾಳ, ಯಲಹಂಕದ ಅಟ್ಟೂರು ಕೆರೆ ಸೇರಿದಂತೆ ಕೆರೆಗಳನ್ನು ವೀಕ್ಷಿಸಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿತು.

ಮುಖ್ಯಮಂತ್ರಿಗೆ ದೂರು: ‘ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯುವ ಸಂಬಂಧ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು ಎಂದು ಬಿಬಿಎಂಪಿಗೆ ಕೇಳಿದ್ದೆವು. ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ನೇರವಾಗಿ ಮುಖ್ಯಮಂತ್ರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ತಿಳಿಸಿದರು.

‘ನಾನಾ ಸಂಘ-ಸಂಸ್ಥೆಗಳು ಶುಕ್ರವಾರದವರೆಗೆ ಗಣೇಶೋತ್ಸವ ನಡೆಸಲು ನಿರ್ಧರಿಸಿವೆ. ರಾಜ್ಯ ಸರ್ಕಾರವು ಸೋಮವಾರದವರೆಗೆ (ಸೆ.20) ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಪೊಲೀಸರಾಗಲಿ, ಬಿಬಿಎಂಪಿ ಸಿಬ್ಬಂದಿಯಾಗಲಿ ಗಣೇಶೋತ್ಸವಕ್ಕೆ ಅಡ್ಡಿಪಡಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಯವರು ಸೂಕ್ತ ಆದೇಶ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು