ಸೋಮವಾರ, ಸೆಪ್ಟೆಂಬರ್ 27, 2021
23 °C
ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 20ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್ ಪ್ರಕರಣ

ಕೋವಿಡ್‌-19: ಗಾಳಿಯಿಂದ ಹರಡುತ್ತಿದೆಯೇ ಕೊರೊನಾ ಸೋಂಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಅಪಾರ್ಟ್‌ಮೆಂಟ್‌ನ ಬ್ಲಾಕ್‌ ಒಂದರಲ್ಲಿಯೇ 20ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಸೋಂಕು ಗಾಳಿಯ ಮೂಲಕ ಹರಡುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.

ಬಡಾವಣೆಯ ರಿನಯಸೆನ್ಸ್‌ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಜುಲೈ 24ರಂದು 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 18 ವರ್ಷದೊಳಗಿನ ಮೂವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಎಲ್ಲ ವಯಸ್ಕರು ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಕೋವಿಡ್‌ ದೃಢಪಟ್ಟ ಅನೇಕರು ಸೋಂಕಿನ ಸೌಮ್ಯ ಲಕ್ಷಣಗಳನ್ನು ಅಥವಾ ಸಾಮಾನ್ಯ ಜ್ವರ, ಶೀತದಂತಹ ಲಕ್ಷಣಗಳನ್ನು ಮಾತ್ರ ಹೊಂದಿದ್ದರು.

‘ಎಲ್ಲ ಪ್ರಕರಣಗಳು ಅಪಾರ್ಟ್‌ಮೆಂಟ್‌ನ ಬ್ಲಾಕ್‌ ‘‘ಎ’’ ನಲ್ಲಿ ಮಾತ್ರ ಕಂಡು ಬಂದಿವೆ. ಅದರಲ್ಲಿಯೂ, ಒಂದರ ಮೇಲೆ ಒಂದರಂತಿರುವ ನೇರ ಮಹಡಿಗಳಲ್ಲಿ ವಾಸಿಸುತ್ತಿರುವವರಲ್ಲಿಯೇ ಸೋಂಕು ಕಂಡು ಬಂದಿದೆ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪವನ್‌ ಚಂದ್ರಶೇಖರ್ ಹೇಳಿದರು.

‘ಸಾಲು ಮಹಡಿಗಳಲ್ಲಿ ಒಂದು ಖಾಲಿ ಇತ್ತು. ಖಾಲಿ ಇರುವ ಮಹಡಿಯ ಮೇಲಿನ ಮನೆಗಳಲ್ಲಿರುವವರಿಗೆ ಯಾವುದೇ ಸೋಂಕು ತಗುಲಿಲ್ಲ’ ಎಂದ ಅವರು, ‘ಅಡುಗೆ ಮನೆಯಿಂದ ಹೊರ ಹೋಗುವ ಗಾಳಿ ಮತ್ತು ಒಂದೇ ದಿಕ್ಕಿನಲ್ಲಿ ಇರುವ ಕಿಟಕಿಗಳ ಮೂಲಕ ಹರಿದಾಡುವ ಗಾಳಿಯಿಂದ ಸೋಂಕು ಹರಡಿರುವ ಸಾಧ್ಯತೆ ಇದೆ. ಏಕೆಂದರೆ, ಇದೇ ಅಪಾರ್ಟ್‌ಮೆಂಟ್‌ನ ಬೇರೆ ಬ್ಲಾಕ್‌ನಲ್ಲಿರುವ ಯಾರಿಗೂ ಸೋಂಕು ತಗುಲಿಲ್ಲ’ ಎಂದು ಅವರು ಹೇಳಿದರು.

‘ಇದೇ ಅಪಾರ್ಟ್‌ಮೆಂಟ್‌ನ ‘‘ಬಿ’’ ಬ್ಲಾಕ್‌ನಲ್ಲಿರುವ 300 ಜನರಿಗೆ ಶನಿವಾರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಯಾರೊಬ್ಬರಲ್ಲಿಯೂ ಸೋಂಕು ದೃಢಪಟ್ಟಿಲ್ಲ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಎನ್. ಶಿವಸ್ವಾಮಿ ತಿಳಿಸಿದರು.

ಮಾದರಿ ಸಂಗ್ರಹ ಅಗತ್ಯ: ‘ಅಪಾರ್ಟ್‌ಮೆಂಟ್‌ನಲ್ಲಿನ ಗಾಳಿಯ ಮಾದರಿಯನ್ನು ಸಂಗ್ರಹಿಸದೇ, ಸೋಂಕು ಗಾಳಿಯ ಮೂಲಕ ಹರಡುತ್ತಿದೆ ಎಂದು ನಿಖರವಾಗಿ ಹೇಳುವುದು ಕಷ್ಟ’ ಎಂದು ನಿಮ್ಹಾನ್ಸ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕ ಡಾ. ಪ್ರದೀಪ್‌ ಬದನೂರ್‌ ಹೇಳಿದರು.

‘ಗಾಳಿಯ ಮೂಲಕ ಸೋಂಕು ಹರಡುತ್ತಿದೆ ಎಂದು ಸಾಬೀತು ಪಡಿಸುವುದು ಕಷ್ಟವಾಗುತ್ತದೆ. ಆದರೆ, ಈ ಹಿಂದಿನ ಅಧ್ಯಯನಗಳ ಪ್ರಕಾರ, ಉಗುಳಿನ ಹನಿಗಳು ಆರು ಅಡಿಯವರೆಗೆ ಹರಡುತ್ತವೆ ಎಂಬುದು ದೃಢಪಟ್ಟಿದೆ’ ಎಂದು ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆಯ ಡಾ. ಬಸವರಾಜ ಕುಂಟೋಜಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು