ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರೋಗಿಗಳಿಗೆ ಔಷಧವಿಲ್ಲ, ಪಡಿತರವಿಲ್ಲ

ತೃತೀಯಲಿಂಗಿಗಳಿಂದ ನಿರ್ಮಿಸಿರುವ ಅನಾಥಾಶ್ರಮ
Last Updated 1 ಮೇ 2021, 22:18 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ಬದಿಯಲ್ಲಿನ ನಿರ್ಗತಿಕರು, ನಿರಾಶ್ರಿತರು ಮತ್ತು ಅನಾಥರಿಗೆ ಆಶ್ರಯ ನೀಡುವ ಉದ್ದೇಶದಿಂದ ‘ನಮ್ಮನೆ ಸುಮ್ಮನೆ’ ಎಂಬ ಅನಾಥಾಶ್ರಮ ಕಟ್ಟಿದ್ದ ತೃತೀಯ ಲಿಂಗಿಗಳು ಈಗ ಕೋವಿಡ್‌ ಕರ್ಫ್ಯೂದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.

ಬೀದಿ–ಬೀದಿಗಳಲ್ಲಿ ಭಿಕ್ಷೆ ಬೇಡಬಾರದು, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಐವರು ಸೇರಿ ಕಟ್ಟಿದ್ದಾರೆ. ಡಿ.23ರಿಂದ ಈ ಅನಾಥಾಶ್ರಮ ಕೆಲಸ ಮಾಡುತ್ತಿದೆ. ವಾಕ್‌ ಮತ್ತು ಶ್ರವಣ ದೋಷ ಉಳ್ಳವರು, ಬುದ್ಧಿಮಾಂದ್ಯರು ಸೇರಿದಂತೆ 22 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ.

‘ಐವರು ಸೇರಿ ಬಾಡಿಗೆ ಮನೆಯಲ್ಲಿ ಈ ಅನಾಥಾಶ್ರಮ ಮಾಡಿದ್ದೇವೆ. ನಾವು ಬ್ಯೂಟಿಪಾರ್ಲರ್‌ ನಡೆಸುತ್ತಿದ್ದು, ಅದರಿಂದ ಬಂದ ಆದಾಯದಲ್ಲಿ ಹಾಗೂ ದಾನಿಗಳು ನೀಡುತ್ತಿದ್ದ ನೆರವಿನಿಂದ ಈ 22 ಮಂದಿಯನ್ನು ನೋಡಿಕೊಳ್ಳುತ್ತಿದ್ದೆವು. ಕೋವಿಡ್‌ ಕರ್ಫ್ಯೂ ಘೋಷಣೆಯಾದ ನಂತರ ಬ್ಯೂಟಿ ಪಾರ್ಲರ್‌ ಸ್ಥಗಿತಗೊಳಿಸಿದ್ದೇವೆ. ನಮಗೆ ನೆರವು ನೀಡುವುದಿರಲಿ ಹತ್ತಿರಕ್ಕೂ ಯಾರೂ ಬರುತ್ತಿಲ್ಲ’ ಎಂದು ‘ನಮ್ಮನೆ ಸುಮ್ಮನೆ’ ಸಂಸ್ಥೆಯ ನಕ್ಷತ್ರಾ ಹೇಳಿದರು.

‘ನಾನು ಸಂಗಮ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅದೂ ಕೂಡ ನಿರ್ಗತಿಕರು ಮತ್ತು ಅನಾಥರ ಸೇವೆ ಮಾಡುವ ಸಂಸ್ಥೆ. ಅಲ್ಲಿಯೂ ಈಗ ಕೆಲಸವಿಲ್ಲ’ ಎಂದು ಹೇಳಿದರು.

‘ತೃತೀಯಲಿಂಗಿಗಳೆಂದರೆ ರಸ್ತೆ ಬದಿಯಲ್ಲಿ, ಸರ್ಕಲ್‌ಗಳಲ್ಲಿ ಭಿಕ್ಷೆ ಬೇಡುವವರು ಎಂದೇ ಜನ ಭಾವಿಸುತ್ತಾರೆ. ಇದನ್ನು ಬದಲಿಸುವುದರ ಜೊತೆಗೆ, ನಿರ್ಗತಿಕರಿಗೆ ನಮ್ಮಿಂದ ಸ್ವಲ್ಪ ಸಹಾಯ ಮಾಡುವ ಉದ್ದೇಶದಿಂದ ಈ ಅನಾಥಾಶ್ರಮ ಮಾಡಿದ್ದೇವೆ. ಆದರೆ, ನಾಲ್ಕೇ ತಿಂಗಳಲ್ಲಿಯೇ ಆಶ್ರಮ ನಡೆಸಲು ಕಷ್ಟವಾಗುತ್ತಿದೆ. ಆಶ್ರಯ ಕೊಡುತ್ತೇವೆ ಎಂದು ಇವರನ್ನೆಲ್ಲ ಕರೆದುಕೊಂಡು ಬಂದು ಅವರಿಗೆ ಆಹಾರ, ಔಷಧ ಕೂಡ ಪೂರೈಸಲು ಸಾಧ್ಯವಾಗದಿರುವುದಕ್ಕೆ ನೋವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆರ್ಥಿಕ ನೆರವು ನೀಡಲು ಬಯಸುವವರು, ಕರ್ನಾಟಕ ಬ್ಯಾಂಕ್‌ ಖಾತೆ ಸಂಖ್ಯೆ– 9682500100555001, ಐಎಫ್‌ಎಸ್‌ಸಿ ಕೋಡ್– ಕೆಎಆರ್‌ಬಿ0000968, ಎಚ್‌ಎಂಟಿ ಶಾಖೆ, ಬೆಂಗಳೂರು ಖಾತೆಗೆ ಹಣ ಜಮಾ ಮಾಡಬಹುದು ಅಥವಾ95352 36199 ಗೂಗಲ್‌ ಪೇ ಅಥವಾ ಫೋನ್ ಪೇ ಮಾಡಬಹುದು. ಪಡಿತರ, ಹಣ್ಣು, ಔಷಧವನ್ನೂ ನೀಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT