ಗುರುವಾರ , ಆಗಸ್ಟ್ 18, 2022
24 °C

ಕೋವಿಡ್: ರಾಜ್ಯದಲ್ಲಿ 5 ಸಾವಿರಕ್ಕೆ ಇಳಿದ ಹೊಸ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಸಂಜೆ 5ರವರೆಗಿನ ಹಿಂದಿನ 24 ಗಂಟೆಗಳ ಅವಧಿಯಲ್ಲಿ 5,041 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇವು ಎರಡೂವರೆ ತಿಂಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಪ್ರಕರಣಗಳಾಗಿವೆ.

ಸೋಂಕು ದೃಢ ಪ್ರಮಾಣವು ಶೇ 3.80ಕ್ಕೆ ಇಳಿಕೆಯಾಗಿದೆ. ಹೊಸ ಪ್ರಕರಣಗಳು ಬೀದರ್‌ (2) ಹಾಗೂ ರಾಯಚೂರಿನಲ್ಲಿ (5) ಕನಿಷ್ಠ ಸಂಖ್ಯೆ ವರದಿಯಾಗಿದ್ದು, ಬಾಗಲಕೋಟೆ, ಬೆಳಗಾವಿ, ಕೊಡಗು ಸೇರಿದಂತೆ 14 ಜಿಲ್ಲೆಗಳಲ್ಲಿ ಎರಡಂಕಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 985 ಮಂದಿ ಹಾಗೂ ಹಾಸನದಲ್ಲಿ 522 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿವೆ. 

ಈ ತಿಂಗಳು 15 ದಿನಗಳಲ್ಲಿ  1.72 ಲಕ್ಷ ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 27.77 ಲಕ್ಷ ದಾಟಿದೆ. ಕೊರೊನಾ ಸೋಂಕಿತರಲ್ಲಿ 115 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಸುಮಾರು 2 ತಿಂಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಮರಣ ಪ್ರಕರಣಗಳು ಇವಾಗಿವೆ. ಆದರೆ, ಮರಣ ಪ್ರಮಾಣ ದರವು ಶೇ 2.28ಕ್ಕೆ ಏರಿಕೆಯಾಗಿದೆ.

ರಾಜ್ಯದ 23 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ 26 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ.

ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 33,148ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 1.62 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 14,785 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 25.81 ಲಕ್ಷ ದಾಟಿದೆ.

ವಿದೇಶ ಪ್ರಯಾಣ: 28 ದಿನಕ್ಕೆ ಎರಡನೇ ಡೋಸ್

ವಿದ್ಯಾಭ್ಯಾಸ ಹಾಗೂ ಉದ್ಯೋಗ ಸಂಬಂಧ ವಿದೇಶಕ್ಕೆ ತೆರಳುವ ಅಭ್ಯರ್ಥಿಗಳಿಗೆ 28 ದಿನಗಳ ಬಳಿಕ ‘ಕೋವಿಶೀಲ್ಡ್‌’ ಲಸಿಕೆಯ ಎರಡನೇ ಡೋಸ್ ನೀಡಲಾಗುತ್ತದೆ.

ಈ ಬಗ್ಗೆ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಸದ್ಯ ವಿದೇಶಕ್ಕೆ ತೆರಳುವವರಿಗೆ 12ರಿಂದ 16 ವಾರಗಳ ಅಂತರದಲ್ಲಿಯೇ ‘ಕೋವಿಶೀಲ್ಡ್’ ಲಸಿಕೆಯ ಎರಡನೇ ಡೋಸ್ ನೀಡಲಾಗುತ್ತಿತ್ತು. ಇದರಿಂದ ವಿದೇಶಕ್ಕೆ ತೆರಳುವವರಿಗೆ ಸಮಸ್ಯೆಯಾಗಿತ್ತು.

‘ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ಸ್‌ಗಾಗಿ ಟೋಕಿಯೊಗೆ ತೆರಳುವ ಕ್ರೀಡಾಪಟುಗಳಿಗೆ 28 ದಿನಗಳ ಬಳಿಕ ಲಸಿಕೆ ಒದಗಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.

ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಣ ಪತ್ರ ನೀಡಬೇಕು. ಅದನ್ನು ಕೋವಿನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು’ ಎಂದು ತಿಳಿಸಿದ್ದಾರೆ.

‘ಮೊದಲ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್‌ ನಂಬರ್ ನೀಡದಿದ್ದ ಫಲಾನುಭವಿಗಳು ಎರಡನೇ ಡೋಸ್ ಪಡೆಯಲು ಲಸಿಕೆ ಪ್ರಮಾಣಪತ್ರವನ್ನು ಒದಗಿಸಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು