ಸೋಮವಾರ, ಮಾರ್ಚ್ 1, 2021
19 °C
ನಿಗದಿಪಡಿಸಲಾದ ಫಲಾನುಭವಿಗಳಲ್ಲಿ ಶೇ 58 ರಷ್ಟು ಮಂದಿ ಹಾಜರ್

ಕೋವಿಡ್ ಲಸಿಕೆ ಅಭಿಯಾನಕ್ಕೆ ಮೊದಲ ದಿನ ಉತ್ತಮ, ಎರಡನೇ ದಿನ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಲಸಿಕೆ ವಿತರಣೆ ಅಭಿಯಾನದ ಎರಡನೇ ದಿನವಾದ ಭಾನುವಾರ 3,659 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ನಿಗದಿಪಡಿಸಲಾದ ಫಲಾನುಭವಿಗಳಲ್ಲಿ ಶೇ 58ರಷ್ಟು ಮಂದಿ ಮಾತ್ರ ಹಾಜರಾಗಿದ್ದರು.

ಅಭಿಯಾನದ ಮೊದಲ ದಿನ ನಗರದಲ್ಲಿ ಲಸಿಕೆ ಪಡೆಯುವಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಕ್ಟೋರಿಯಾ ಸೇರಿದಂತೆ 11 ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗಿತ್ತು. 878 ಫಲಾನುಭವಿಗಳಲ್ಲಿ 637 ಮಂದಿ ಮಂದಿ ಲಸಿಕೆ ಪಡೆದುಕೊಂಡಿದ್ದರು. ಶೇ 73 ರಷ್ಟು ಮಂದಿ ಹಾಜರಾಗಿದ್ದರು. ಎರಡನೇ ದಿನವಾದ ಭಾನುವಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ನಡೆಯಲಿಲ್ಲ.

ಮಣಿಪಾಲ್‌, ಸೇಂಟ್‌ ಫಿಲೋಮಿನಾ, ಬ್ಯಾಪಿಸ್ಟ್‌ ಹಾಗೂ ಕಾಕ್ಸ್‌ ಟೌನ್‌ನ ಹೆರಿಗೆ ಆಸ್ಪತ್ರೆಯನ್ನು ಮಾ‌ತ್ರ ಗುರುತಿಸಿ, ಅಲ್ಲಿ 63 ಕೇಂದ್ರಗಳನ್ನು ಕಾರ್ಯಾಚರಣೆ ಮಾಡಲಾಗಿತ್ತು. ಈ ಕೇಂದ್ರಗಳಲ್ಲಿ ಒಂದೇ ದಿನ 6,277 ಮಂದಿಗೆ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ರಜಾ ದಿನವಾಗಿದ್ದ ಕಾರಣ ಕೆಲವರು ಹಾಜರಾಗಿರಲಿಲ್ಲ.

‘ಕೋವಿನ್‌’ ಪೋರ್ಟಲ್ ಹಾಗೂ ಆ್ಯಪ್ ಸಮಸ್ಯೆ ಮುಂದುವರಿದಿದ್ದು, ಕೆಲವೆಡೆ ಕೇಂದ್ರದ ಸಿಬ್ಬಂದಿ ದೂರವಾಣಿ ಕರೆ ಮಾಡಿ, ಫಲಾನುಭವಿಗಳಿಗೆ ಹಾಜರಾಗಲು ಸೂಚಿಸಿದರು. ಇದರಿಂದ ಕೂಡ ಪ್ರಕ್ರಿಯೆಗೆ ಹಿನ್ನಡೆಯಾಯಿತು. ಕೇಂದ್ರದ ಸಿಬ್ಬಂದಿ ದಾಖಲಾತಿ ಪಟ್ಟಿಗಳಲ್ಲಿ ನಮೂದಿಸಿಕೊಂಡು ಲಸಿಕೆ ವಿತರಣೆ ಮಾಡಿದ ಪರಿಣಾಮ ಹೆಚ್ಚಿನ ಸಮಯ ಬೇಕಾಯಿತು. ‘ಕೋವಿಶೀಲ್ಡ್’ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ಬಹುತೇಕರು ನಿಗಾ ಅವಧಿ ಮುಗಿದ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾದರು. ಸಂಜೆ 5.30ರವರಗೆ ಲಸಿಕೆ ವಿತರಣೆ ನಡೆಯಿತು. ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಶುಶ್ರೂಷಕರು, ವೈದ್ಯರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಲಸಿಕೆ ಪಡೆದುಕೊಂಡರು.

ವಿವಿಧ ಕಾರಣಗಳಿಂದ ಗೈರು

ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ‘ಲಸಿಕೆ ಪಡೆದವರಲ್ಲಿ ಯಾರಲ್ಲಿಯೂ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಕೆಲವರು ಗೈರಾಗಿರುವ ಬಗ್ಗೆ ಆಸ್ಪತ್ರೆಗಳ ಮುಖ್ಯಸ್ಥರನ್ನು ವಿಚಾರಿಸಿದ್ದೇನೆ. ಇನ್ನಷ್ಟು ದಿನ ಕಾದು ಲಸಿಕೆ ಪಡೆಯೋಣ ಎಂಬ ಮನೋಭಾವದಲ್ಲಿ ಕೆಲವರು ಇದ್ದಾರೆ. ಬೇರೆ ಕಡೆ ಪ್ರಯಾಣ, ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ಲಸಿಕೆ ಪಡೆದುಕೊಳ್ಳಲು ಬಂದಿಲ್ಲ. ಒಟ್ಟಾರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆಯುವವರು ಕಡ್ಡಾಯವಾಗಿ ಕೋವಿನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರಬೇಕು. ನೋಂದಣಿ ಮಾಡಿಕೊಂಡಿರುವವರಿಗೆ ಒ.ಟಿ.ಪಿ ರವಾನೆಯಾಗದಿದ್ದಲ್ಲಿ ಆಫ್ ಲೈನ್ ಮೂಲಕವೂ ನಿಖರ ಮಾಹಿತಿ ಸಂಗ್ರಹಿಸಿ, ಲಸಿಕೆ ನೀಡಬಹುದಾಗಿದೆ. ತದನಂತರ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬೇಕಾಗುತ್ತದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು