ಕೋವಿಡ್ ಲಸಿಕೆ: ನಾಲ್ಕು ಕೇಂದ್ರಗಳಲ್ಲಿ ನಡೆದ ತಾಲೀಮು

ಬೆಂಗಳೂರು: ನಗರದ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಪೂರ್ವಾಭ್ಯಾಸವನ್ನು (ಡ್ರೈ ರನ್) ಶನಿವಾರ ನಡೆಸಲಾಯಿತು.
ಯಲಹಂಕದ ಸಾರ್ವಜನಿಕ ಆಸ್ಪತ್ರೆ, ವಿದ್ಯಾಪೀಠ, ಕಾಮಾಕ್ಷಿಪಾಳ್ಯ ಹಾಗೂ ಆನೇಕಲ್ನ ಹಾರೋಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ತಾಲೀಮು ನಡೆಯಿತು. ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಿಧ ಪ್ರಕ್ರಿಯೆಗಳನ್ನು ನಡೆಸಲಾಯಿತು. ಲಸಿಕೆಯ ಫಲಾನುಭವಿಗಳಾಗಿ ಪ್ರತಿ ಆರೋಗ್ಯ ಕೇಂದ್ರದಲ್ಲಿ ತಲಾ 25 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ದಾಖಲಾತಿಗಳ ಪರಿಶೀಲನೆ, ಹೆಸರು ನೋಂದಣಿ, ಲಸಿಕೆ ವಿತರಣೆ, ಪೋರ್ಟಲ್ನಲ್ಲಿ ವಿವರ ನಮೂದನೆ ಸೇರಿದಂತೆ ವಿವಿಧ ಪ್ರಕ್ರಿಯೆ ಬಗ್ಗೆ ಸಿಬ್ಬಂದಿಗೆ ತಿಳಿಸಿಕೊಡಲಾಯಿತು.
ಕೇಂದ್ರಗಳಿಗೆ ಬಂದ ಫಲಾನುಭವಿಗಳ ದೇಹದ ಉಷ್ಣಾಂಶವನ್ನು ಸಿಬ್ಬಂದಿಯು ಪರಿಶೀಲಿಸಿದರು. ಸೋಂಕು ನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತರು ತಮ್ಮ ಪಾಳಿಗಾಗಿ ಕೊಠಡಿಯಲ್ಲಿ ಕಾಯಬೇಕಾಗಿತ್ತು. ಕಾಯುವ ಕೊಠಡಿಯಲ್ಲಿ ಐದರಿಂದ ಆರು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಲಸಿಕೆಯ ಹಾಕುವಿಕೆ ಪ್ರಕ್ರಿಯೆ ನಡೆದ ಬಳಿಕ ಅರ್ಧಗಂಟೆ ವೀಕ್ಷಣಾ ಕೊಠಡಿಯಲ್ಲಿ ಕುಳ್ಳಿರಿಸಲಾಯಿತು. ವಿದ್ಯಾಪೀಠದ ಆರೋಗ್ಯ ಕೇಂದ್ರದಲ್ಲಿ ಗುರುತಿಸಲಾದ ಆರೋಗ್ಯ ಕಾರ್ಯಕರ್ತರಲ್ಲಿ ಕೆಲವರು ಗೈರಾಗಿದ್ದರು.
ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕೆ ವಿತರಣಾ ಅಧಿಕಾರಿ ಸುನೀಲ್ ವಿ., ‘ನಮಗೆ ನೀಡಲಾಗಿರುವ 25 ಮಂದಿಯ ಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ನಿಗದಿತ ವ್ಯಕ್ತಿ ಬರದಿದ್ದಲ್ಲಿ ಅವರ ಪಾಲಿಗೆ ಬೇರೆಯವನ್ನು ಗುರುತಿಸುವುದಿಲ್ಲ. ಇಬ್ಬರು ಅನಾರೋಗ್ಯ ಸಮಸ್ಯೆಯ ಕಾರಣ ಬಂದಿಲ್ಲ’ ಎಂದರು.
ಸಂಸದ ತೇಜಸ್ವಿಸೂರ್ಯ, ಶಾಸಕರಾದ ಎಸ್.ಆರ್. ವಿಶ್ವನಾಥ್, ರವಿ ಸುಬ್ರಹ್ಮಣ್ಯ ಸೇರಿದಂತೆ ಕೆಲ ಜನಪ್ರತಿನಿಧಿಗಳು ಕೂಡ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
200 ಶೀತಲೀಕರಣ ಘಟಕ: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 1.65 ಲಕ್ಷ ಆರೋಗ್ಯ ಕಾರ್ಯಕರ್ತರ ಮಾಹಿತಿ ಪೊರ್ಟಲ್ನಲ್ಲಿ ಅಪ್ಲೋಡ್ ಆಗಿದೆ. 200 ಶೀತಲೀಕರಣ ಘಟಕಗಳನ್ನು ಸಿದ್ಧಗೊಳಿಸಲಾಗಿದೆ. ಲಸಿಕೆಯ ವಿತರಣೆ ಕೇಂದ್ರಗಳಲ್ಲಿ ಮೂರು ಕೊಠಡಿಗಳು ಇರಬೇಕಾಗುತ್ತದೆ. ಕೋವಿಡ್ ಪೋರ್ಟಲ್ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಫಲಾನುಭವಿಗಳಿಗೆ ಮೊದಲು ದೂರವಾಣಿ ಸಂದೇಶ ಕಳುಹಿಸಲಾಗುತ್ತದೆ. ನಂತರ ಅವರು ನಿಗದಿತ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಬೇಕಾಗುತ್ತದೆ. ಲಸಿಕೆ ಬಂದ ಬಳಿಕ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಈ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಸಾರ್ವಜನಿಕ ಆರೋಗ್ಯ) ರಾಜೇಂದ್ರ ಚೋಳನ್ ತಿಳಿಸಿದರು.
ಬ್ರಿಟನ್ ದೂರವಾಣಿ ಸಂಖ್ಯೆ ನೀಡಿದ ವಲಸಿಗರು
‘1,300 ಮಂದಿ ಬ್ರಿಟನ್ನಿಂದ ನಗರಕ್ಕೆ ಬಂದಿದ್ದಾರೆ. 58 ಜನರ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಅವರನ್ನು ಪತ್ತೆ ಮಾಡಲು ಪಾಸ್ಪೋರ್ಟ್ ಕೇಂದ್ರದ ಅಧಿಕಾರಿಗಳು ಹಾಗೂ ಪೊಲೀಸರ ನೆರವು ಪಡೆಯಲಾಗಿದೆ. ನಾಪತ್ತೆಯಾದವರಲ್ಲಿ ಕೆಲವರು ಬ್ರಿಟನ್ ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೀಗಾಗಿ ಅವರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ರಾಜೇಂದ್ರ ಚೋಳನ್ ತಿಳಿಸಿದರು.
‘1,700 ಮಂದಿಗೆ ತರಬೇತಿ’
‘ಕೋವಿಡ್ ಲಸಿಕೆ ವಿತರಣೆಗಾಗಿ 1,700 ಮಂದಿಗೆ ತರಬೇತಿ ನೀಡಲಾಗಿದೆ. ಲಸಿಕೆ ವಿತರಣೆ ವೇಳೆ ಸಿಬ್ಬಂದಿ ಕೊರತೆಯಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಾಗುತ್ತದೆ. ಸದ್ಯ 48 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳು ಇದ್ದಾರೆ’ ಎಂದು ರಾಜೇಂದ್ರ ಚೋಳನ್ ಮಾಹಿತಿ ನೀಡಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.