ಸೋಮವಾರ, ಸೆಪ್ಟೆಂಬರ್ 20, 2021
29 °C

ನಿರೀಕ್ಷೆಯಷ್ಟು ಕೋವಿಡ್‌ ಲಸಿಕೆ ಪೂರೈಕೆ ಆಗಿಲ್ಲ: ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಲ್ಲಿ ಕೋವಿಡ್‌ ಲಸಿಕಾ ಅಭಿಯಾನ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಮುಖ್ಯ ಆಯುಕ್ತ ಗೌರವ್‌ ಗುಪ್ತ ಒಪ್ಪಿಕೊಂಡರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಜುಲೈ ತಿಂಗಳಿನಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಲಸಿಕೆಗಳು ಪೂರೈಕೆ ಆಗಿಲ್ಲ. ಆದರೆ, ಆಗಸ್ಟ್‌ ತಿಂಗಳಿನಲ್ಲಾದರೂ ಬೇಡಿಕೆಯಷ್ಟು ಲಸಿಕೆ ಪೂರೈಕೆ ಆಗಬಹುದು ಎಂಬ ವಿಶ್ವಾಸ ಇದೆ. ಸರ್ಕಾರ ಲಸಿಕೆ ಪೂರೈಕೆ ಮಾಡಿದರೆ ನಿತ್ಯ 1.5 ಲಕ್ಷದಷ್ಟು ಮಂದಿಗೆ ಲಸಿಕೆ ನೀಡಲು ಪಾಲಿಕೆ ಸಜ್ಜಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಲಸಿಕೆ ಪಡೆಯಲು ಅರ್ಹತೆ ಪಡೆದಿರುವ ಶೇ 67ರಷ್ಟು ಮಂದಿ ಈಗಾಗಲೇ ಲಸಿಕೆಯ ಒಂದು ಡೋಸ್‌ ಪಡೆದಿದ್ದಾರೆ. ಶೇ 17ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ನಾವು ಈಗ ಲಸಿಕೆಯ ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ಗಳನ್ನೂ ನೀಡಬೇಕಾಗಿದೆ. ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಲಸಿಕೆ ಪುರೈಕೆ ಆದರೆ ಲಸಿಕಾ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡುವಷ್ಟು ಸೌಕರ್ಯವನ್ನು ಹೊಂದಿದ್ದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಲ್ಲಿ 19,25,739 ಡೋಸ್‌ ಲಸಿಕೆಗಳನ್ನು ನೀಡಲಾಗಿದೆ.

13 ಸಾವಿರ ಲಸಿಕಾ ಕೇಂದ್ರಗಳನ್ನು ಹೊಂದಿರುವ ರಾಜ್ಯವು ದಿನದಲ್ಲಿ 10 ಲಕ್ಷ ಡೋಸ್‌ ಲಸಿಕೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ. ತಿಂಗಳಿಗೆ 1.5 ಕೋಟಿ ಲಸಿಕೆ ಪೂರೈಸುವಂತೆ ರಾಜ್ಯ ಸರ್ಕಾರವು ಕೇಂದ್ರವನ್ನು ಕೋರಿತ್ತು. ಆದರೂ ರಾಜ್ಯ ಸರ್ಕಾರಕ್ಕೆ ಜುಲೈ ತಿಂಗಳ ಕೋಟಾದಲ್ಲಿ 42 ಲಕ್ಷ ಡೋಸ್‌ಗಳಷ್ಟು ಲಸಿಕೆಗಳನ್ನು ಮಾತ್ರ ಹಂಚಿಕೆಯಾಗಿತ್ತು. ಅದರಲ್ಲಿ, 40 ಲಕ್ಷ ಡೋಸ್‌ಗಳು ಮಾತ್ರ ಪೂರೈಕೆ ಆಗಿದ್ದವು. 15 ಲಕ್ಷ ಡೋಸ್‌ಗಳಷ್ಟು ಲಸಿಕೆಗಳನ್ನು ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, 6.5 ಲಕ್ಷ ಡೋಸ್‌ಗಳಿಗೆ ಮಾತ್ರ ಖಾಸಗಿ ಆಸ್ಪತ್ರೆಗಳು ಹಣ ಪಾವತಿಸಿದ್ದವು. ಆದರೆ, ಪೂರೈಕೆ ಆಗಿದ್ದು 4.51 ಲಕ್ಷ ಡೋಸ್‌ಗಳು ಮಾತ್ರ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು