ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಶ್ರೂಷಕರ ಅಂತರಂಗ: ‘ಸವಾಲುಗಳ ನಡುವೆ ಅನಿವಾರ್ಯತೆ’

Last Updated 1 ಮೇ 2021, 22:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಮೊದಲನೇ ಅಲೆಗೆ ಹೋಲಿಸಿದಲ್ಲಿ ಈಗ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ. ಆಸ್ಪತ್ರೆಗಳಲ್ಲಿನ ಎಲ್ಲ ಹಾಸಿಗೆಗಳು ಭರ್ತಿಯಾಗುತ್ತಿದ್ದು, ರೋಗಿಗಳು ಹಾಗೂಅವರ ಕುಟುಂಬದ ಸದಸ್ಯರನ್ನು ನಿರ್ವಹಿಸಬೇಕಾದ ಸವಾಲು ಕೂಡ ಎದುರಾಗಿದೆ. ಬೇಸಿಗೆ ಬೇಗೆ ನಡುವೆ ದಿನವಿಡೀ ಪಿಪಿಇ ಕಿಟ್ ಧರಿಸಿ, ಸೇವೆ ನೀಡಬೇಕಾದ ಅನಿವಾರ್ಯತೆ ನಮಗಿದೆ.’

‘1992ರಲ್ಲಿ ನಾನು ಶುಶ್ರೂಷಕ ವೃತ್ತಿ ಪ್ರಾರಂಭಿಸಿದೆ. ಸುದೀರ್ಘ ಅವಧಿಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಸಾರ್ಸ್, ಎಬೋಲಾ, ಎಚ್‌1ಎನ್‌1 ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಸೋಂಕಿತರಿಗೆ ಆರೈಕೆ ಮಾಡಿದ ಅನುಭವ ಹೊಂದಿದ್ದೇನೆ. ಕೋವಿಡ್‌ ನಮಗೆ ಕೆಟ್ಟ ಅನುಭವ ನೀಡಿದ್ದು, ಸವಾಲುಗಳ ನಡುವೆ ಪರಿಸ್ಥಿತಿ ಎದುರಿಸಬೇಕಾಗಿದೆ.’

‘ಆಸ್ಪತ್ರೆಗೆ ದಾಖಲಾದ ಕೋವಿಡ್‌ ಪೀಡಿತರು ಗಲಾಟೆ ಮಾಡಿದಾಗ ಅವರನ್ನು ಸಮಾಧಾನ ಮಾಡಬೇಕಾಗುತ್ತದೆ. ಆದರೆ, ನಮ್ಮಲ್ಲಿನ ಒತ್ತಡ, ಸಮಸ್ಯೆ, ಸವಾಲುಗಳ ಬಗ್ಗೆ ಹೊರಗಿನವರಿಗೆ ಅರ್ಥವಾಗುತ್ತಿಲ್ಲ. ಪಿಪಿಇ ಕಿಟ್‌ ಧರಿಸಿ ಸೇವೆ ನೀಡಬೇಕಾದ ಕಾರಣ ಕೆಲವು ದಿನ ನೀರನ್ನು ಕುಡಿಯಲು ಕೂಡ ಸಾಧ್ಯವಾಗುವುದಿಲ್ಲ. ಮನೆ, ಕುಟುಂಬದ ಸದಸ್ಯರು, ಸಂಬಂಧಿಗಳು, ಸ್ನೇಹಿತರನ್ನು ಮರೆತು ಕಾರ್ಯನಿರ್ವಹಿಸುತ್ತಿದ್ದೇವೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ನಮ್ಮಿಂದ ಕುಟುಂಬದ ಸದಸ್ಯರು ಕೂಡ ಸೋಂಕಿತರಾಗುವ ಸಾಧ್ಯತೆಗಳು ಇರುತ್ತವೆ.’

‘ರಾತ್ರಿ ಪಾಳಿಯಲ್ಲಿ 12 ಗಂಟೆ ಅವಧಿ ಕಾರ್ಯನಿರ್ವಹಿಸುತ್ತಿದ್ದೇವೆ. ಸಿಬ್ಬಂದಿ ಕೊರತೆಯಿಂದ ರಜೆ ರಹಿತ ಸೇವೆ ನೀಡಬೇಕಾಗುತ್ತಿದೆ. ಕರ್ತವ್ಯದ ಅವಧಿಯಲ್ಲಿ ಸದಾ ಜಾಗೃತರಾಗಿ ಇರಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ರೋಗಿಗೆ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಕೆಲವು ಸಂದರ್ಭದಲ್ಲಿ ಅವಸರದಲ್ಲಿ ಪಿಪಿಇ ಕಿಟ್ ಧರಿಸದೆಯೇ ವಾರ್ಡ್‌ಗಳಿಗೆ ಹೋಗುತ್ತೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯ ಸೇವಾ ಮನೋಭಾವವನ್ನು ಜನತೆ ಗುರುತಿಸುತ್ತಿಲ್ಲ ಅನಿಸುತ್ತದೆ. ರೋಗಿಗಳ ಸ್ಥಿತಿಯನ್ನು ನೋಡಲಾಗದೆಯೇ ಸ್ವಯಂ ಪ್ರೇರಿತರಾಗಿ ಹೆಚ್ಚಿನ ಅವಧಿ ಸೇವೆ ನೀಡುತ್ತಿದ್ದೇವೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT