ಬುಧವಾರ, ಸೆಪ್ಟೆಂಬರ್ 30, 2020
20 °C
ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತರ ದಿಢೀರ್‌ ಭೇಟಿ l ಎಚ್‌ಎಎಲ್‌ನಿಂದ ಎರಡು ಆಂಬುಲೆನ್ಸ್ ಹಸ್ತಾಂತರ

ಬೆಂಗಳೂರು: ಮತ್ತೆ 2,544 ಮಂದಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಸೋಂಕು ಪ್ರಮಾಣ

ಬೆಂಗಳೂರು: ನಗರದಲ್ಲಿ ಗುರುವಾರ 2,544 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 67 ಸಾವಿರದ ಗಡಿ ದಾಟಿದೆ.  

ಸೋಂಕಿತರಲ್ಲಿ ಮತ್ತೆ 15 ಮಂದಿ ಮೃತಪಟ್ಟಿದ್ದು, ಕೋವಿಡ್‌ಗೆ ಈವರೆಗೆ ಸಾವಿಗೀಡಾದವರ ಸಂಖ್ಯೆ 1,178ಕ್ಕೆ ಏರಿಕೆಯಾಗಿದೆ. ಮತ್ತೆ 2,972 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಸಕ್ರೀಯ ಪ್ರಕರಣಗಳನ್ನು ಗುಣಮುಖರ ಸಂಖ್ಯೆ ಹಿಂದಿಕ್ಕಿದೆ. 33 ಸಾವಿರಕ್ಕೂ ಅಧಿಕ ಮಂದಿ ಈವರೆಗೆ ಗುಣಮುಖರಾಗಿದ್ದು, ಸದ್ಯ 32 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಪಶ್ಚಿಮ ವಲಯದಲ್ಲಿಯೇ ಅಧಿಕ ಮಂದಿ (634) ಸೋಂಕಿತರಾಗಿದ್ದಾರೆ. ದಕ್ಷಿಣ ವಲಯದಲ್ಲಿ 343, ಬೊಮ್ಮನಹಳ್ಳಿಯಲ್ಲಿ390, ಪೂರ್ವ ವಲಯದಲ್ಲಿ 392, ಮಹದೇವಪುರದಲ್ಲಿ 148, ಆರ್.ಆರ್.ನಗರದಲ್ಲಿ 180, ಯಲಹಂಕದಲ್ಲಿ 117 ಹಾಗೂ ದಾಸರಹಳ್ಳಿಯಲ್ಲಿ 136 ಮಂದಿಗೆ ಸೋಂಕು ತಗುಲಿದೆ. 10 ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ 25 ರಷ್ಟು ಮಂದಿ ಆ ಭಾಗಕ್ಕೆ ಸೇರಿದವರು. 324 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ದಿಢೀರ್ ಪರಿಶೀಲನೆ: ಬಿಬಿಎಂಪಿ ವ್ಯಾಪ್ತಿಯ ಮೂರು ಖಾಸಗಿ ಆಸ್ಪತ್ರೆಗಳಿಗೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಗರಿಕರಿಗೆ ಅನುಕೂಲ ಕಲ್ಪಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಕೂಡಲೇ ನಾಗರಿಕ ಸಹಾಯ ಕೇಂದ್ರ ತೆರೆಯಲು ಕ್ರಮ ವಹಿಸಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಅವರಿಗೆ ಮೇಯರ್‌ ಸೂಚಿಸಿದರು. ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಳ ನಿಖರ ಮಾಹಿತಿ ನೀಡುವ ರಿಯಲ್ ಟೈಮ್ ಡಿಜಿಟಲ್ ಬೋರ್ಡ್ ಅಳವಡಿಸಬೇಕು ಎಂದರು.

ಆರಂಭದಲ್ಲಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಮೇಯರ್‌ ಭೇಟಿ ನೀಡಿದರು. ’ಈಗಾಗಲೇ ಕೆಲವು ಕೋವಿಡ್ ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಆದರೆ, ವೆಬ್ ಪೋರ್ಟಲ್‌ನಲ್ಲಿ ಈ ಮಾಹಿತಿ ನಮೂದಿಸಿಲ್ಲ. ಇದನ್ನು ಸರಿಪಡಿಸಬೇಕು‘ ಎಂದು ಆಸ್ಪತ್ರೆಯ ಮೇಲ್ವಿಚಾರಕರು ಕೋರಿದರು. ಈ ಲೋಪವನ್ನು ಕೂಡಲೇ  ಸರಿಪಡಿಸುವಂತೆ ಮೇಯರ್‌ ಸೂಚಿಸಿದರು. 

ನಂತರ ವಿಕ್ರಮ್ ಆಸ್ಪತ್ರೆಗೆ ತೆರಳಿ ಕೋವಿಡ್ ಸೋಂಕಿತರನ್ನು ಆರೈಕೆ ಮಾಡುವ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಎಷ್ಟು ಹಣ ಪಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದರು. ’₹3 ಸಾವಿರ ಮಾತ್ರ ಪಡೆಯಲಾಗುತ್ತಿದೆ‘ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಗೌತಮ್‌ ಕುಮಾರ್‌, ’ಯಾರೇ ಬಂದರೂ ಅವರಿಗೆ ಮೊದಲು ಚಿಕಿತ್ಸೆ ನೀಡಬೇಕು. ಫಿವರ್ ಕ್ಲಿನಿಕ್ ನಲ್ಲಿ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಸಂಗ್ರಹಿಸಬೇಕು‘ ಎಂದು ಸೂಚಿಸಿದರು.

ಎರಡು ಆಂಬುಲೆನ್ಸ್ ಹಸ್ತಾಂತರಿಸಿದ ಎಚ್‌ಎಎಲ್‌: ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲು ಹಾಗೂ ವಿವಿಧ ವೈದ್ಯಕೀಯ ಸೇವೆಗಳಿಗಾಗಿ ಎರಡು ಆಂಬುಲೆನ್ಸ್‌ಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹಸ್ತಾಂತರಿಸಿದೆ. 

ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು. ಬಳಿಕ ಅವರು ಎಚ್‌ಎಎಲ್‌ನ ಕೋವಿಡ್ ಆರೈಕೆ ಕೇಂದ್ರಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಎಚ್‌ಎಎಲ್ ಮುಖ್ಯಸ್ಥ ಆರ್.ಮಾಧವನ್ ಮಾಹಿತಿ ನೀಡಿದರು.

‘ಆಪ್‌ ಕೇರ್‌’ಗೆ ಚಾಲನೆ

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು, ಮನೆ–ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುವ ‘ಆಪ್‌ ಕೇರ್‌’ ಕಾರ್ಯಕ್ರಮಕ್ಕೆ ಆಮ್‌ ಆದ್ಮಿ ಪಕ್ಷ ಚಾಲನೆ ನೀಡಿದೆ.

‘ಪಿಪಿಇ ಕಿಟ್‌ ಧರಿಸಿ ಹೊರಡುವ ಪಕ್ಷದ ಕಾರ್ಯಕರ್ತರು, ಸೋಂಕಿನ ಲಕ್ಷಣವಿರುವ ನಾಗರಿಕರ ಮನೆಗೆ ತೆರಳಿ ಅವರ ದೇಹದ ತಾಪಮಾನ, ಆಮ್ಲಜನಕದ ಮಟ್ಟ ಪರೀಕ್ಷಿಸುತ್ತಾರೆ. ಮನೆಗಳನ್ನು ಸ್ಯಾನಿಟೈಸ್‌ ಕೂಡ ಮಾಡಲಿದ್ದಾರೆ. ಸೋಂಕಿನ ಕುರಿತು ಮಾಹಿತಿ ನೀಡಿ, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ’ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಬಿಎಂಪಿ ಆರೋಗ್ಯ ಅಧಿಕಾರಿಗಳ, ಆಸ್ಪತ್ರೆಗಳ ಸಂಪರ್ಕ ವಿವರಗಳನ್ನು ನಾಗರಿಕರಿಗೆ ಒದಗಿಸಲಾಗುವುದು’ ಎಂದು ಅವರು ಹೇಳಿದರು.

ಸರ್ಕಾರ ವಿಫಲ: ‘ರಾಜ್ಯದಲ್ಲಿ ಏಪ್ರಿಲ್‌–ಮೇನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು ಮತ್ತು ದೇಶದಲ್ಲಿಯೇ 11ನೇ ಸ್ಥಾನದಲ್ಲಿತ್ತು. ಸರ್ಕಾರ ಸೋಂಕು ತಡೆಯಲು ಸಮರ್ಪಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿಲ್ಲ. ಜುಲೈನಲ್ಲಿ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿ ಈಗ 4ನೇ ಸ್ಥಾನದಲ್ಲಿದೆ. ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ದೂರಿದರು.

ನಗರದ ಕೋವಿಡ್ ಪ್ರಕರಣಗಳ ಅಂಕಿ–ಅಂಶ

ಒಟ್ಟು ಪ್ರಕರಣಗಳು; 67,425

ಗುಣಮುಖರಾದವರು; 33,932

ಸಕ್ರಿಯ ಪ್ರಕರಣಗಳು; 32,314

ಮೃತಪಟ್ಟವರು; 1,178

ಈ ದಿನದ ಏರಿಕೆ; 2,544

ಗುಣಮುಖರು; 2,972

ಮೃತಪಟ್ಟವರು; 15

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.