ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ಸಂಪರ್ಕಿತರಿಗೆ ರೂಪಾಂತರ ವೈರಾಣು

ನಗರದಲ್ಲಿ ಹೊಸ ಮಾದರಿಯ ಕೋವಿಡ್ ಪೀಡಿತರ ಸಂಖ್ಯೆ 7ಕ್ಕೆ ಏರಿಕೆ
Last Updated 5 ಜನವರಿ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಸಂಪರ್ಕಿತ ವ್ಯಕ್ತಿಗೆ ರೂಪಾಂತರ ಕೊರೊನಾ ವೈರಾಣು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ಹೊಸ ಮಾದರಿಯ ಕೋವಿಡ್ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದ 53 ವರ್ಷದ ಮಹಿಳೆಯಲ್ಲಿ ಹೊಸ ಮಾದರಿಯ ಕೊರೊನಾ ವೈರಾಣು ಕಾಣಿಸಿಕೊಂಡಿದೆ. ಇವರ ಕುಟುಂಬದ ಸದಸ್ಯರು ಕೆಲ ದಿನಗಳ ಹಿಂದೆ ಬ್ರಿಟನ್‌ನಿಂದ ಇಲ್ಲಿಗೆ ಬಂದು, ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿ ಅವರು ಸೋಂಕಿತರಾಗಿದ್ದರು. ಒಂದೇ ಕುಟುಂಬದ ನಾಲ್ವರಲ್ಲಿ ಹೊಸ ಮಾದರಿಯ ವೈರಾಣು ಕಾಣಿಸಿಕೊಂಡಿತ್ತು. ಅವರ ಸಂಪರ್ಕಕ್ಕೆ ಬಂದಿದ್ದ ಮಹಿಳೆಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈ ನಡುವೆ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟ ಕಾರಣ ಇವರ ಮಾದರಿಯನ್ನು ಜಿನೋಮಿಕ್ ಸಿಕ್ವೇನ್ಸಸ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಇವರಿಗೆ ಹೊಸ ಮಾದರಿಯ ವೈರಾಣು ತಗುಲಿರುವುದು ದೃಢಪಟ್ಟಿದೆ.

‘ಸೋಂಕಿತ ಮಹಿಳೆಯು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗಕ್ಕೆ ತೆರಳಿದವರಲ್ಲಿ ಸೋಂಕು ದೃಢಪಡುತ್ತಿದ್ದಂತೆಯೇ ಇಲ್ಲಿ ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸಂಪರ್ಕಿತರಲ್ಲಿ ಮಹಿಳೆಯೊಬ್ಬರು ಮಾತ್ರ ಸೋಂಕಿತರಾಗಿದ್ದರು. ಉಳಿದವರಿಗೆ ಸೋಂಕು ತಗುಲಿಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕೆಲ ದಿನಗಳ ಹಿಂದೆ ರಾಜಾಜಿನಗರದ ಮಹಿಳೆಯೊಬ್ಬರು ಬ್ರಿಟನ್‌ನಿಂದ ಬಂದಿದ್ದ ಮಗಳ ಸಂಪರ್ಕದಿಂದ ಸೋಂಕಿತರಾಗಿದ್ದರು. ಅವರಿಗೆ ಕೂಡ ಹೊಸ ಮಾದರಿಯ ವೈರಾಣು ತಗುಲಿರುವುದು ಖಚಿತಪಟ್ಟಿತ್ತು. ಇದರಿಂದಾಗಿ ನಗರದಲ್ಲಿ ಸಂಪರ್ಕಿತರಿಗೆ ರೂಪಾಂತರ ವೈರಾಣು ತಗುಲಿದ ಪ್ರಕರಣಗಳ ಸಂಖ್ಯೆ ಎರಡಕ್ಕೆ ತಲುಪಿದೆ. ಇನ್ನೂ ಕೆಲ ಸಂಪರ್ಕಿತರ ಮಾದರಿಗಳನ್ನು ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಂಕಿತರು ವಿಕ್ಟೋರಿಯಾ ಹಾಗೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT