ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಸಂಕಟ

ಕೊರೊನಾ ಸೋಂಕಿತರಿಗೆ ಆದ್ಯತೆ l ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ l ಚಿಕಿತ್ಸೆಯಲ್ಲಿ ಏರುಪೇರು
Last Updated 5 ಆಗಸ್ಟ್ 2020, 0:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಹುತೇಕ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಅನ್ಯ ರೋಗಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿಕ್ಟೋರಿಯಾ ಸೇರಿದಂತೆ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಳನ್ನಾಗಿ ಪರಿವರ್ತಿಸಲಾಗಿದೆ. ಇನ್ನೊಂದೆಡೆ, ಕೋವಿಡೇತರ ಆಸ್ಪತ್ರೆಗಳಲ್ಲೂ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಸೋಂಕಿತರಾಗುತ್ತಿದ್ದಾರೆ. ಇದರಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ‘ತುರ್ತು ಚಿಕಿತ್ಸೆಗಳು ಅಗತ್ಯವಿದ್ದಲ್ಲಿ ಮಾತ್ರ ಆಸ್ಪತ್ರೆಗೆ ಬನ್ನಿ. ಇಲ್ಲವಾದಲ್ಲಿ ನಿಗದಿತ ಮಾತ್ರೆಗಳನ್ನು ಸೇವಿಸಿ, ಚಿಕಿತ್ಸೆ ಮುಂದೂಡಿ ಟೆಲಿ ಕನ್ಸಲ್ಟೇಷನ್ ಮೂಲಕ ವೈದ್ಯರನ್ನು ಸಂಪರ್ಕಿಸಿ’ ಎಂದು ಆಸ್ಪತ್ರೆಗಳು ಮನವಿ ಮಾಡಿಕೊಳ್ಳಲಾರಂಭಿಸಿವೆ. ಹೃದಯ, ಮೂತ್ರಪಿಂಡ, ಶ್ವಾಸಕೋಶ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳು ಹಾಗೂ ಮನೋರೋಗದಿಂದ ಬಳಲುತ್ತಿರುವವರು ಮಾತ್ರೆ ಸೇವಿಸಿ, ಚಿಕಿತ್ಸೆ ಮುಂದೂಡುತ್ತಿದ್ದಾರೆ.

ಈ ನಡುವೆ, ಅಧಿಕ ಕೋವಿಡ್ ಪ್ರಕರಣಗಳು ವರದಿಯಾದ ಕಾರಣಕ್ಕೆ ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ನೆಪ್ರೊ ಯುರಾಲಜಿ ಸಂಸ್ಥೆ, ನಿಮ್ಹಾನ್ಸ್ ಒಳಗೊಂಡಂತೆ ನಗರದ ಪ್ರಮುಖ ಆಸ್ಪತ್ರೆಗಳು ತಾತ್ಕಾಲಿಕವಾಗಿ ಹೊರರೋಗಿ ವಿಭಾಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳು ಮತ್ತೆ ಕಾರ್ಯಾರಂಭ ಮಾಡಿವೆ.

ಖಾಸಗಿ ಆಸ್ಪತ್ರೆಗಳು ಹಿಂದೇಟು: ನಗರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ. ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದರೂ ಬಾಗಿಲು ತೆರೆದಿಲ್ಲ. ಹೀಗಾಗಿ, ಗಂಭೀರ
ವಲ್ಲದ ಸಮಸ್ಯೆಯಿಂದ ಬಳಲುತ್ತಿರುವವರು ಮನೆ ಆರೈಕೆಗೆ ಮೊರೆ ಹೋಗಲಾರಂಭಿಸಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿವೆ.

ಕೋವಿಡ್‌ ಚಿಕಿತ್ಸೆಗೆ 70ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೊರೊ
ನಾ ಸೋಂಕಿತರಿಗೆ ಮೀಸಲಿಡಲು ಸರ್ಕಾರ ಸೂಚಿಸಿದೆ. ಇಲ್ಲಿ ಸಹ ಕೋವಿಡೇತರ ರೋಗಿಗಳು ಚಿಕಿತ್ಸೆ ಸಿಗದೆ ಪಡಿಪಾ
ಟಲು ಪಡುತ್ತಿದ್ದಾರೆ. ಜಯನಗರ ಸಾರ್ವಜನಿಕ ಆಸ್ಪತ್ರೆ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಕೆ.ಸಿ. ಜನರಲ್, ಸಿ.ವಿ. ರಾಮನ್ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಹಾಗೂ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಇದರಿಂದ ಕೂಡ ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ.

‘ಕೋವಿಡೇತರ ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಚಿಕಿತ್ಸೆ ನೀಡದಿದ್ದಲ್ಲಿ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಮುಂದೂಡಿಕೆ

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಕೋವಿಡೇತರ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರನ್ನು ಕೋವಿಡ್ ಚಿಕಿತ್ಸೆಗೆ ನಿಯೋಜನೆ ಮಾಡುತ್ತಿರುವ ಪರಿಣಾಮ ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ. ನೇತ್ರ ಹಾಗೂ ದಂತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೂಡ ಚಿಕಿತ್ಸೆಯನ್ನು ಮುಂದಕ್ಕೆ ಹಾಕುವಂತೆ ಸೂಚಿಸಲಾಗುತ್ತಿದೆ.

‘ಈ ಮೊದಲು ಪ್ರತಿನಿತ್ಯ ಸರಾಸರಿ 300 ಹೊರರೋಗಿಗಳು ಬರುತ್ತಿದ್ದರು. ಈಗ ಆ ಸಂಖ್ಯೆ 120ಕ್ಕೆ ಇಳಿಕೆಯಾಗಿದೆ. ಜೀವಕ್ಕೆ ಅಪಾಯವಿಲ್ಲದಿದ್ದಲ್ಲಿ ಅಂಗಾಂಗ ಕಸಿಯನ್ನು ಮುಂದೂಡಲಾಗುತ್ತಿದೆ. ಸೇವೆಯಲ್ಲಿ ವ್ಯತ್ಯಯವಾಗಿಲ್ಲ’ ಎಂದು ಡಾ. ಆರ್. ಕೇಶವಮೂರ್ತಿ ತಿಳಿಸಿದರು.

‘ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ಮುಂದೂಡಿದಲ್ಲಿ ಸಮಸ್ಯೆ ಆಗುತ್ತದೆ. ಅಗತ್ಯ ಮುಂಜಾಗ್ರತೆ ವಹಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಚಿಕಿತ್ಸೆ ಪಡೆಯದೆ ಮನೆಯಲ್ಲಿ ಉಳಿದಲ್ಲಿ ಜೀವಕ್ಕೆ ಅಪಾಯ ಎದುರಾಗಲಿದೆ’ ಎಂದು ಕಿದ್ವಾಯಿ ಕ್ಯಾನ್ಸರ್ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ಅಂಕಿ–ಅಂಶಗಳು

10,689

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿರುವ ಒಟ್ಟು ಹಾಸಿಗೆಗಳು

4,036

ವೈದ್ಯಕೀಯ ಕಾಲೇಜುಗಳು ಕೋವಿಡ್‌ಗೆ ಮೀಸಲಿಟ್ಟ ಹಾಸಿಗೆಗಳು

2,984

ನಗರದ 16 ಸರ್ಕಾರಿ ಆಸ್ಪತ್ರೆಯಲ್ಲಿರುವ ಒಟ್ಟು ಹಾಸಿಗೆಗಳು

1,330

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಗುರುತಿಸಲಾದ ಹಾಸಿಗೆಗಳು

16,257

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡೇತರ ಕಾಯಿಲೆಗೆ ಮೀಸಲಿಟ್ಟ ಹಾಸಿಗೆಗಳು

‌7,663

ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟ ಹಾಸಿಗೆಗಳು

7,40

ಕೋವಿಡ್ ಆಸ್ಪತ್ರೆಗಳಲ್ಲಿ ಇರುವ ಹಾಸಿಗೆಗಳು

*ಆಸ್ಪತ್ರೆಗಳಲ್ಲಿ ಸೋಂಕಿತರು, ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಎರಡಕ್ಕೂ ಪ್ರತ್ಯೇಕವಾಗಿ ಆಸ್ಪತ್ರೆ ಗುರುತಿಸಬೇಕು

-ಡಾ.ಎಸ್. ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕಾರ್ಯದರ್ಶಿ

*ಡಯಾಲಿಸಿಸ್ ಸೇರಿದಂತೆ ವಿವಿಧ ತುರ್ತು ಚಿಕಿತ್ಸೆಗಳನ್ನು ಮುಂದೂಡುವ ಹಾಗಿಲ್ಲ. ಕೋವಿಡ್‌ ಕಾರಣ ಹೊರರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ

-ಡಾ.ಆರ್. ಕೇಶವಮೂರ್ತಿ, ನೆಫ್ರೊ ಯುರಾಲಜಿ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT