ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ವೈದ್ಯರಿಗೆ ಪ್ಲಾಸ್ಮಾ ನೀಡಿದ ಯುವಕ

ವೈದ್ಯರ ಜೀವ ಉಳಿಸಿದ ಪ್ಲಾಸ್ಮಾ ಚಿಕಿತ್ಸೆ
Last Updated 8 ಆಗಸ್ಟ್ 2020, 22:09 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನಿಂದ ಗಂಭೀರ ಅಸ್ವಸ್ಥರಾಗಿ, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರೊಬ್ಬರಿಗೆ 21 ವರ್ಷದ ಯುವಕರೊಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಅವರು ಚೇತರಿಸಿಕೊಳ್ಳಲು ನೆರವಾಗಿದ್ದಾರೆ.

ಹಿರಿಯ ಹೃದ್ರೋಗ ತಜ್ಞ ಡಾ.ಬಿ.ಎಚ್.ನಟೇಶ್ ಅವರಿಗೆ ಜು.16ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರನ್ನು ಬನ್ನೇರುಘಟ್ಟ ರಸ್ತೆ ಬಳಿಯ ಅಪೊಲೊ ಆಸ್ಪತ್ರೆಗೆ ಜು.21ರಂದು ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದರಿಂದಾಗಿ ಕೂಡಲೇ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿ, ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಯಿತು.

ಆದರೆ, ಅವರ ಸ್ಥಿತಿ ಇನ್ನಷ್ಟು ಹದಗೆಟ್ಟ ಕಾರಣ ವೈದ್ಯರು ಪ್ಲಾಸ್ಮಾ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಜು.28ರಂದು ಡಾ. ನಟೇಶ್ ಅವರ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಎಚ್‌ಸಿಜಿ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ಬ್ಯಾಂಕ್‌ ಸಂಪರ್ಕಿಸಿದರು.

ಜೂನ್‌ ತಿಂಗಳಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದ 21 ವರ್ಷದ ಯುವ ಉದ್ಯಮಿ ಕುನಾಲ್ ಗನ್ನಾ ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನಕ್ಕೆ ಮುಂದಾದರು. ಅವರ ಪ್ಲಾಸ್ಮಾವನ್ನು ಸೋಂಕಿತ ವೈದ್ಯರಿಗೆ ನೀಡಿ, ಚಿಕಿತ್ಸೆ ನಡೆಸಲಾಯಿತು. ಮೂರು ದಿನಗಳ ಬಳಿಕ ವೈದ್ಯರು ಚೇತರಿಸಿಕೊಳ್ಳಲಾರಂಭಿಸಿದರು. ಐದು ದಿನಗಳ ನಂತರ ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡ ಪರಿಣಾಮ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಯಿತು. ಅವರನ್ನು ಆ.5 ರಂದು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದರು.

ಕೋವಿಡ್‌ ಜಯಿಸಿದ ಡಾ.ಬಿ.ಎಚ್.ನಟೇಶ್ ಅವರು ಪ್ಲಾಸ್ಮಾ ದಾನಿಗೆ ಎಚ್‌ಸಿಜಿ ಆಸ್ಪತ್ರೆಯು ಏರ್ಪಡಿಸಿದ್ದ ಆನ್‌ಲೈನ್ ಸಂವಾದದಲ್ಲಿ ಧನ್ಯವಾದ ತಿಳಿಸಿದರು. ‘ಗುಣಮುಖರಾಗಿರುವ ಇನ್ನಷ್ಟು ಜನ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಬೇಕು. ಕೋವಿಡ್‌ನಿಂದ ಸಾವಿಗೀಡಾಗುವುದನ್ನು ತಡೆಯಲು ಇದರಿಂದ ಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT