ಗುರುವಾರ , ಮೇ 13, 2021
34 °C
ಮೇಡಿ ಅಗ್ರಹಾರ ಚಿತಾಗಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ದಿಢೀರ್‌ ಭೇಟಿ

ಕೋವಿಡ್‌ ಕಾರಣದ ಸಾವು ಹೆಚ್ಚಳ: ಚಿತಾಗಾರ ಸಿಬ್ಬಂದಿಗೆ ಪಾಳಿ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆ ದಿಢೀರ್‌ ಹೆಚ್ಚಳ ಕಂಡಿದ್ದರಿಂದ ನಗರದ ವಿದ್ಯುತ್ ಚಿತಾಗಾರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇಲ್ಲಿನ ಸಿಬ್ಬಂದಿ ಹಗಲೂ ರಾತ್ರಿ ಶವಗಳ ಅಂತ್ಯಸಂಸ್ಕಾರ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿಯ ಒತ್ತಡ ಕಡಿಮೆ ಮಾಡಲು ಪಾಳಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚಿಸಿದರು.

ಯಲಹಂಕ ವಲಯದ ಎಂ.ಎಸ್.ಪಾಳ್ಯದ ಹತ್ತಿರದ ಮೇಡಿ ಅಗ್ರಹಾರದ ವಿದ್ಯುತ್‌ ಚಿತಾಗಾರಕ್ಕೆ ಭಾನುವಾರ ದಿಢೀರ್‌ ಭೇಟಿ ನೀಡಿ ಅವರು ಪರಿಸ್ಥಿತಿಗಳನ್ನು ಅವಲೋಕಿಸಿದರು.

ಈ ಚಿತಾಗಾರದಲ್ಲಿ ಇತ್ತೀಚೆಗೆ ನಿತ್ಯ ಸುಮಾರು 20-25 ಶವಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಹೆಚ್ಚಾಗಿ ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಮೃತದೇಹಗಳು ಈ ಚಿತಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಆಸ್ಪತ್ರೆಗಳು ತಡ ರಾತ್ರಿಯಲ್ಲೂ ಶವಗಳನ್ನು ಕಳುಹಿಸುತ್ತಿರುವುದರಿಂದಾಗಿ ಇಲ್ಲಿನ ಸಿಬ್ಬಂದಿ ಮಧ್ಯರಾತ್ರಿವರೆಗೂ ಅಂತ್ಯಕ್ರಿಯೆ ಮುಂದುವರಿಸಬೇಕಾದ ಸ್ಥಿತಿ ಇಲ್ಲಿದೆ ಎಂದು ಸಿಬ್ಬಂದಿ ವಿವರಿಸಿದರು.

ಈ ಚಿತಾಗಾರದಲ್ಲಿ ಹೆಚ್ಚಾಗಿ ಖಾಸಗಿ ಆಂಬ್ಯುಲೆನ್ಸ್‌ಗಳ ಮೂಲಕ ಶವಗಳನ್ನು ತರಲಾಗುತ್ತಿದೆ. ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಇಲ್ಲಿಗೆ ಕರೆತಂದಾಗ ಇಲ್ಲಿ ಜನ ಜಂಗುಳಿಯೂ ಉಂಟಾಗುತ್ತಿದೆ.

ಕೋವಿಡ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳುವ ಸಲುವಾಗಿ ಚಿತಾಗಾರದ ಬಳಿ ಕೂಡಲೇ ಮಾರ್ಷಲ್‌ಗಳನ್ನು ನಿಯೋಜಿಸಬೇಕು. ಪೊಲೀಸ್ ಸಿಬ್ಬಂದಿಯೂ ಆಗಾಗ ಭೇಟಿ ನೀಡಿ ಇಲ್ಲಿ ಜನ ಅಂತರ ಕಾಪಾಡುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಜಂಟಿ ಆಯುಕ್ತ ಅಶೋಕ್‌ ಅವರಿಗೆ ಮುಖ್ಯ ಆಯುಕ್ತರು ಸೂಚಿಸಿದರು. 

ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಗೊತ್ತುಪಡಿಸಲಾದ ಚಿತಾಗಾರಗಳಿಗೆ ನಿತ್ಯವು 20ಕ್ಕೂ ಅಧಿಕ ಮೃತದೇಹಗಳು ಬರುತ್ತಿರುವುದರಿಂದ ಅಲ್ಲಿನ ಸಿಬ್ಬಂದಿ ಮಧ್ಯರಾತ್ರಿವರೆಗೂ ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ‘ಪ್ರಜಾವಾಣಿ’ ಭಾನುವಾರದ ಸಂಚಿಕೆಯಲ್ಲಿ ‘ತಡರಾತ್ರಿವರೆಗೂ ಶವ ಸುಡುವ ಚಿತಾಗಾರ ಕಾರ್ಮಿಕರು’ ಎಂಬ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಚಿತಾಗಾರ ಸಿಬ್ಬಂದಿಯ ಬವಣೆಗಳ ಬಗ್ಗೆ ಬೆಳಕು ಚೆಲ್ಲಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು