ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಮಾರುತ್ತಿದ್ದವ ಬಂಧನ

Last Updated 2 ಸೆಪ್ಟೆಂಬರ್ 2021, 23:08 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದಿಂದ ನಗರಕ್ಕೆ ಬರಲು ಯತ್ನಿಸುತ್ತಿದ್ದವರಿಗೆ ‘ಆರ್‌ಟಿಪಿಸಿಆರ್ ನೆಗೆಟಿವ್ ವರದಿ’ ಮಾರುತ್ತಿದ್ದ ಆರೋಪದಡಿ ನಿಪುಣ್ (29) ಎಂಬಾತನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದು, ಆತನನ್ನು ಇದೀಗ ಕೇರಳ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

‘ಕೇರಳದ ನಿಪುಣ್, ಪಿಯುಸಿವರೆಗೂ ಓದಿದ್ದಾನೆ. ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆತ, ಸ್ಥಳೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು‌ ಕೊಡಿಸುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ನಿಂದ ಹೆಚ್ಚು ಕೆಲಸವಿರಲಿಲ್ಲ. ಹಣ ಸಂಪಾದಿಸಲು, ನಕಲಿ ವರದಿ ತಯಾರಿಸಿ ಮಾರಲಾರಂಭಿಸಿದ್ದ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಆತನ ವಿರುದ್ಧ ಕೇರಳದಲ್ಲೂ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು, ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ’ ಎಂದೂ ತಿಳಿಸಿದರು.

‘ಕೇರಳದಿಂದ ಬೆಂಗಳೂರಿಗೆ ಬರುವವರಿಗೆ ‘ಆರ್‌ಟಿಪಿಸಿಆರ್ ನೆಗೆಟಿವ್ ವರದಿ’ ಕಡ್ಡಾಯಗೊಳಿಸಲಾಗಿದೆ. ಕೆಲವರ ವರದಿಗಳು ಪಾಸಿಟಿವ್ ಬಂದಿದ್ದವು. ಅವರೆಲ್ಲ ಬೆಂಗಳೂರಿಗೆ ಬರಲು ಯತ್ನಿಸುತ್ತಿದ್ದರು. ಅಂಥವರನ್ನು ಸಂಪರ್ಕಿಸುತ್ತಿದ್ದ ಆರೋಪಿ ನಿಪುಣ್, ನಕಲಿ ವರದಿ ತಯಾರಿಸಿ ಕೊಡುತ್ತಿದ್ದ. ಅದಕ್ಕಾಗಿ ₹ 2 ಸಾವಿರದಿಂದ ₹ 5 ಸಾವಿರ ಪಡೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.

'ಆರೋಪಿ ಕಡೆಯಿಂದ ಲ್ಯಾಪ್‌ಟಾಪ್, ಮುದ್ರಣ ಯಂತ್ರ ಹಾಗೂ ‘ಆರ್‌ಟಿಪಿಸಿಆರ್ ನೆಗಟಿವ್ ವರದಿ’ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ, ನಕಲಿ ವೀಸಾ ಸಹ ತಯಾರಿಸಿ ಮಾರಾಟ ಮಾಡಿದ್ದಾನೆ. ಈ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ಎಲೆಕ್ಟ್ರಿಷಿಯನ್ ಬಂಧನ: ಚಿನ್ನಾಭರಣ ಜಪ್ತಿ
ಬೆಂಗಳೂರು:
ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಎಲೆಕ್ಟ್ರಿಷಿಯನ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಉಲ್ಲಾಸ್ ಹಾಗೂ ರುದ್ರೇಶ್ ಬಂಧಿತರು. ಅವರಿಂದ ₹ 7 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣ, 70 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಅವರಿಬ್ಬರ ಬಳಿ ₹ 2.50 ಲಕ್ಷ ನಗದು ಸಹ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.

‘ಹೆಗ್ಗನಹಳ್ಳಿ ಬಳಿಯ ಸಂಜೀವಿನಗರದ ಮನೆಯೊಂದರಲ್ಲಿ ಆಗಸ್ಟ್ 19ರಂದು ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆ. 27ರಂದು ಬೆಳಿಗ್ಗೆ ಸುಂಕದಕಟ್ಟೆ ಬಸ್ ತಂಗುದಾಣ ಬಳಿ ಆರೋಪಿಗಳು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು. ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಸಂಗತಿ ಬಾಯ್ಬಿಟ್ಟರು’ ಎಂದೂ ತಿಳಿಸಿದರು.

‘ಬಂಧಿತರ ಪೈಕಿ, ಒಬ್ಬಾತ ಎಲೆಕ್ಟ್ರಿಷಿಯನ್. ಬಸವೇಶ್ವರನಗರ, ಮಲ್ಲೇಶ್ವರ ಹಾಗೂ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಕೃತ್ಯ ಎಸಗಿದ್ದ. ಜೈಲಿಗೂ ಹೋಗಿ ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರಬಂದಿದ್ದ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT