ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಬಾಣಂತಿ ಕೊಂದು ಠಾಣೆ ಬಳಿಗೆ ಅಂಬುಲೆನ್ಸ್‌ನಲ್ಲಿ ಶವ ತಂದ ಪತಿ

ಮರಣೋತ್ತರ ಪರೀಕ್ಷೆ ವರದಿ ನೀಡಿದ ಸುಳಿವು
Published : 9 ನವೆಂಬರ್ 2023, 23:30 IST
Last Updated : 9 ನವೆಂಬರ್ 2023, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಅಲೀಮಾ ಉರುಫ್ ಬಿ. ಅನುರಾಧಾ (33) ಸಾವಿನ ರಹಸ್ಯ ಭೇದಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಕೊಲೆ ಆರೋಪದಡಿ ಪತಿ ರಾಜಶೇಖರ್‌ನನ್ನು (28) ಬಂಧಿಸಿದ್ದಾರೆ.

‘ಅನಂತಪುರದ ಆರೋಪಿ ರಾಜಶೇಖರ್, ಪತ್ನಿ ಅಲೀಮಾ ಅವರನ್ನು ಅ. 29ರಂದು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿ ನಾಟಕವಾಡಿದ್ದ. ಅಲೀಮಾ ಅವರದ್ದು ಕೊಲೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗುತ್ತಿದ್ದಂತೆ, ರಾಜಶೇಖರ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಷದ ಸ್ನೇಹ: ‘ಆರೋಪಿ ರಾಜಶೇಖರ್, ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ. ವಿವಾಹಿತೆ ಅಲೀಮಾ, ಮೊದಲ ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಬೆಂಗಳೂರಿಗೆ ಬಂದಿದ್ದರು. ಸ್ನೇಹಿತೆ ಜೊತೆ ವಾಸವಿದ್ದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಲೀಮಾ ಅವರ ಸ್ನೇಹಿತೆಯ ಜೊತೆ ರಾಜಶೇಖರ್ ಒಡನಾಟ ಹೊಂದಿದ್ದ. ಆದರೆ, ಸ್ನೇಹಿತೆ ಆತನನ್ನು ದೂರ ಮಾಡಿದ್ದಳು. ಇದಾದ ನಂತರ ಅಲೀಮಾ ಜೊತೆ ವರ್ಷದ ಹಿಂದೆಯಷ್ಟೇ ಸ್ನೇಹ ಬೆಳೆಸಿದ್ದ ರಾಜಶೇಖರ್, ಸಲುಗೆ ಇಟ್ಟುಕೊಂಡಿದ್ದ. ಮದುವೆ ಸಹ ಆಗಿದ್ದನೆಂದು ಹೇಳಲಾಗುತ್ತಿದೆ.’

‘ಕೂಡ್ಲು ಬಳಿಯ ನಂಜರೆಡ್ಡಿ ಬಡಾವಣೆಯ ಮನೆಯಲ್ಲಿ ಇಬ್ಬರೂ ಒಟ್ಟಿಗೆ ವಾಸವಿದ್ದರು. ಅಲೀಮಾ ಎರಡು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಳು’ ಎಂದು ಮೂಲಗಳು ತಿಳಿಸಿವೆ.

ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ: ‘ರಾಜಶೇಖರ್, ಬೇರೊಂದು ಯುವತಿ ಜೊತೆ ಸುತ್ತಾಡುತ್ತಿದ್ದ. ಇದನ್ನು ಅಲೀಮಾ ಪ್ರಶ್ನಿಸಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಪತ್ನಿ ಮೇಲೆ ರಾಜಶೇಖರ್ ಹಲವು ಬಾರಿ ಹಲ್ಲೆ ಮಾಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅ. 29ರಂದು ರಾತ್ರಿ ಇಬ್ಬರ ನಡುವೆ ಪುನಃ ಜಗಳ ಶುರುವಾಗಿತ್ತು. ‘ನಾನು ಬದುಕುವುದಿಲ್ಲ. ಸಾಯುತ್ತೇನೆ’ ಎಂಬುದಾಗಿ ಅಲೀಮಾ ಕೂಗಾಡುತ್ತಿದ್ದರು. ‘ನೀನು ಸಾಯಲೇ ಬೇಕು. ಸಾಯದಿದ್ದರೆ ನಾನೇ ಸಾಯಿಸುತ್ತೇನೆ’ ಎನ್ನುತ್ತಲೇ ಆರೋಪಿ, ಕುತ್ತಿಗೆಗೆ ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದ’ ಎಂದು ಮೂಲಗಳು ತಿಳಿಸಿವೆ.

ಠಾಣೆ ಬಳಿ ಮೃತದೇಹ: ‘ಪತ್ನಿಯ ಮೃತದೇಹವನ್ನು ನೇಣಿಗೆ ಹಾಕಿದ್ದ ಆರೋಪಿ, ‘ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಜನರನ್ನು ಸೇರಿಸಿದ್ದ. ನಂತರ, ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಠಾಣೆ ಬಳಿ ತಂದಿದ್ದ‘ ಎಂದು ಮೂಲಗಳು ತಿಳಿಸಿವೆ.

‘ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಸ್ವಲ್ಪ ಸ್ವಲ್ಪ ಉಸಿರಾಡುತ್ತಿದ್ದಾಳೆ. ನನಗೆ ದಿಕ್ಕು ತೋಚದಂತಾಗಿದೆ’ ಎಂದು ರಾಜಶೇಖರ್ ಗೋಳಾಡಿದ್ದ. ಆತ ಹೇಳುತ್ತಿರುವುದು ನಿಜವೆಂದು ತಿಳಿದಿದ್ದ ಸ್ಥಳೀಯರು ಹಾಗೂ ಸಿಬ್ಬಂದಿ, ಆಂಬುಲೆನ್ಸ್‌ ಅನ್ನು ಸೇಂಟ್‌ ಜಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದರು’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

‘ಅಲೀಮಾ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಅಲ್ಲಿಯ ಸಿಬ್ಬಂದಿ ಬಳಿಯೂ ಆರೋಪಿ, ಆತ್ಮಹತ್ಯೆ ಕಥೆ ಹೇಳಿದ್ದ. ಕತ್ತಿನಲ್ಲಿದ್ದ ಗಾಯದ ಗುರುತಿನಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಸಂಬಂಧಿಕರು ಹಾಗೂ ಸ್ಥಳೀಯರು ಸಹ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೆವು. ಇತ್ತೀಚೆಗೆ ವರದಿ ಬಂದಿದ್ದು, ಕೊಲೆ ಎಂಬುದು ಖಾತ್ರಿಯಾಯಿತು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT