ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವಿ ಕತ್ತರಿಸಿದ್ದ ಕೋಪಕ್ಕೆ ರೌಡಿ ಹತ್ಯೆ; ಐವರು ಆರೋಪಿಗಳ ಬಂಧನ

Last Updated 30 ಜುಲೈ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಜುಲೈ 28ರಂದು ನಡೆದಿದ್ದ ರೌಡಿ ಹರೀಶ್ ಅಲಿಯಾಸ್ ಮಿಠಾಯಿ ಹತ್ಯೆ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಬಾಣಸವಾಡಿ ನಿವಾಸಿಗಳಾದ ರಕ್ಷಿತ್, ನೆಲ್ಸನ್, ಅವಿನಾಶ್, ಸುಭಾಷ್ ಹಾಗೂ ಇಂದ್ರಜಿತ್ ಬಂಧಿತರು. ಅವರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಸವೇಶ್ವರನಗರ ಠಾಣೆ ರೌಡಿ ಪಟ್ಟಿಯಲ್ಲಿ ಹರೀಶ್ ಹೆಸರಿತ್ತು. ತನ್ನದೇ ತಂಡ ಕಟ್ಟಿಕೊಂಡು ಬಾಣಸವಾಡಿ, ಹೆಣ್ಣೂರು ಹಾಗೂ ಸುತ್ತಮುತ್ತ ಅಪರಾಧ ಕೃತ್ಯ ಎಸಗುತ್ತಿದ್ದ. 2017ರಲ್ಲಿ ರಕ್ಷಿತ್ ಮೇಲೆ ಹಲ್ಲೆ ಮಾಡಿದ್ದ ಆತ, ಬಲ ಕಿವಿ ಕತ್ತರಿಸಿದ್ದ. ಜೊತೆಗೆ, ಆತನ ಅಣ್ಣನಿಗೂ ಜೀವ ಬೆದರಿಕೆ ಹಾಕಿದ್ದ. ಅದರಿಂದ ಕೋಪಗೊಂಡಿದ್ದ ರಕ್ಷಿತ್, ಸಹಚರರ ಜೊತೆ ಸೇರಿ ಹರೀಶ್‌ನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಈ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ’ ಎಂದೂ ತಿಳಿಸಿದರು.

ಠಾಣೆಯಿಂದ ಹೊರಬಂದಿದ್ದಾಗಲೇ ದಾಳಿ: ‘ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದ ರೌಡಿ ಹರೀಶ್, ಸಹಿ ಮಾಡಲು ಬಾಣಸವಾಡಿ ಠಾಣೆಗೆ ಬಂದಿದ್ದ. ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳು, ತಂಡ ಕಟ್ಟಿಕೊಂಡು ಠಾಣೆ ಸಮೀಪಕ್ಕೆ ಬಂದಿದ್ದರು. ಠಾಣೆಯಿಂದ ಹೊರಬಂದಿದ್ದ ಹರೀಶ್, ಎಚ್‌ಆರ್‌ಬಿಆರ್ ಬಡಾವಣೆಯ ಸಿಎಂಆರ್ ಕಾಲೇಜು ಬಳಿ ರಸ್ತೆಯಲ್ಲಿ ಹೊರಟಿದ್ದ. ಅದೇ ಸಂದರ್ಭದಲ್ಲೇ ಆರೋಪಿಗಳು ದಾಳಿ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಮಾರಕಾಸ್ತ್ರಗಳಿಂದ ಹರೀಶ್‌ಗೆ ಹೊಡೆದಿದ್ದರು. ರಸ್ತೆಯಲ್ಲಿ ಕುಸಿದು ಬಿದ್ದಿದ್ದ ಹರೀಶ್ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದರು’ ಎಂದೂ ತಿಳಿಸಿದರು.

‘ಕೃತ್ಯದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಹತ್ಯೆಯಾದ ಹರೀಶ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ರಕ್ಷಿತ್ ಮೇಲೆ ಹಲ್ಲೆ ಮಾಡಿದ್ದ ಸಂಗತಿ ತಿಳಿಯಿತು. ರಕ್ಷಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ಉಳಿದವರೂ ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT