ಶುಕ್ರವಾರ, ಜನವರಿ 27, 2023
23 °C
ಮೈಸೂರು ರಸ್ತೆ- ಕೆಂಗೇರಿ ಮೆಟ್ರೊ ಮಾರ್ಗಕ್ಕೆ ಸಿಆರ್‌ಎಸ್ ಅನುಮತಿ

ಮಾಸಾಂತ್ಯದೊಳಗೆ ಕೆಂಗೇರಿಗೆ ಮೆಟ್ರೊ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಮ್ಮ ಮೆಟ್ರೊ ರೀಚ್‌ –2 ವಿಸ್ತರಣೆ ಯೋಜನೆಯಲ್ಲಿ ಮೈಸೂರು ರಸ್ತೆ- ಕೆಂಗೇರಿ ನಡುವಿನ ಎತ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ರೈಲ್ವೇ ಸುರಕ್ಷತಾ ಆಯುಕ್ತರಾದ ಅಭಯ್‌ ಕುಮಾರ್ ರೈ ಅನುಮತಿ ನೀಡಿದ್ದಾರೆ. ಈ ಮಾರ್ಗದಲ್ಲಿ ಈ ಮಾಸಾಂತ್ಯದೊಳಗೆ ಮೆಟ್ರೊ ರೈಲು ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಈ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ‌ ಅನುಮತಿ ಸಿಗುತ್ತಿದ್ದಂತೆಯೇ ಈ ಮಾರ್ಗದ ಲೋಕಾರ್ಪಣೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ಆರಂಭಿಸಿದ್ದಾರೆ‌.

‘ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಷರತ್ತುಬದ್ಧ ಅನುಮತಿ ಸೋಮವಾರ ಸಿಕ್ಕಿದೆ. ಕೆಲವೊಂದು ಸಲಹೆಗಳನ್ನೂ ಅವರು ನೀಡಿದ್ದಾರೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ತಿಳಿಸಿದರು.

ಈ ಮಾರ್ಗದ ಲೋಕಾರ್ಪಣೆಗೆ ದಿನಾಂಕ ನಿಗದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಕುರಿತು ಕೇಂದ್ರ ಹಾಗೂ ರಾಜ್ಯ ಸಚಿವಾಲಯಗಳನ್ನು ಸಂಪರ್ಕಿಸಬೇಕಿದೆ. ಶೀಘ್ರವೇ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ’ ಎಂದರು.

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ಮಾರ್ಗದ ಉದ್ಘಾಟನಾ ಸಮಾರಂಭ ಏರ್ಪಡಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿತ್ತು. ಆದರೆ, ಇನ್ನು ಉಳಿದಿರುವ ಅಲ್ಪಾವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಣ್ಯರ ದಿನಾಂಕ ಹೊಂದಾಣಿಕೆ ಮಾಡುವುದು ಕಷ್ಟ. ಆದರೆ, ಆಗಸ್ಟ್‌ ಅಂತ್ಯದೊಳಗೆ ಈ ಮಾರ್ಗ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಪೂರ್ವ– ಪಶ್ಚಿಮ ಕಾರಿಡಾರ್‌ನ ಈ ವಿಸ್ತರಿತ ಮಾರ್ಗದ ಒಟ್ಟು ಉದ್ದ 7.3 ಕಿ.ಮೀ. ಕೆಂಗೇರಿಯಿಂದ ಚಲ್ಲಘಟ್ಟ ಡಿಪೋವರೆಗಿನ 1.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನೇರಳೆ ಮಾರ್ಗದ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 6.2 ಕಿ.ಮೀ ಉದ್ದದ ಈ ವಿಸ್ತರಿತ ಮಾರ್ಗ ಆರು ನಿಲ್ದಾಣಗಳನ್ನು ಒಳಗೊಂಡಿದೆ. ಇದರ ಕಾಮಗಾರಿ ಎರಡು ವರ್ಷಗಳಿಗೆ ಮುನ್ನವೇ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ ಹಾಗೂ ಇತರ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು