ಭಾನುವಾರ, ಮೇ 9, 2021
27 °C
ಖಾಸಗಿ ಲ್ಯಾಬ್‌ಗಳಿಂದ ವಸೂಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಿನವಿಡೀ ಕಾಯಬೇಕಾದ ಸ್ಥಿತಿ

ಸಿಟಿ ಸ್ಕ್ಯಾನ್‌: ಸರ್ಕಾರಿ ವರ–ಖಾಸಗಿ ಶಾಪ!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ವರದಿ ಬಂದಿದ್ದರೂ ರೋಗಿಗಳ ಸ್ಥಿತಿ ಗಂಭೀರವಾಗುತ್ತಿರುವುದು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಬಹುತೇಕ ವೈದ್ಯರು ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಪ್ರಯೋಗಾಲಯಗಳು ಹೆಚ್ಚು ಹಣ ವಸೂಲಿ ಮಾಡುತ್ತಿವೆ ಎಂದು ಸಾರ್ವಜನಿಕರು ದೂರುತ್ತಾರೆ.

‘ಆರ್‌ಟಿ- ಪಿಸಿಆರ್‌ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ವರದಿ ಬಂದಿತ್ತು. ಆದರೂ, ಎದೆ ನೋವು ಇತ್ತು. ವೈದ್ಯರಿಗೆ ಹೇಳಿದಾಗ ಸಿಟಿ ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದರು. ಜಯನಗರದ ಎರಡು–ಮೂರು ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ತೆರಳಿದರು. ₹6,500ದಿಂದ ₹7,000 ಕೇಳಿದರು. ಅಷ್ಟು ದುಡ್ಡು ನನ್ನ ಬಳಿ ಇರಲಿಲ್ಲ. ಕೊನೆಗೆ, ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿದೆ’ ಎಂದು ಜೆ.ಪಿ. ನಗರದ ಪುಟ್ಟೇನಹಳ್ಳಿ ನಿವಾಸಿ ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ತಂದೆ–ತಾಯಿಗೆ ಇಬ್ಬರಿಗೂ ಕೋವಿಡ್ ಪಾಸಿಟಿವ್‌ ಆಗಿತ್ತು. ಆದರೆ, ಉಸಿರಾಟ ಸಮಸ್ಯೆ ಏನೂ ಇರಲಿಲ್ಲ. ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದ್ದರು. ಜಯನಗರದಲ್ಲಿನ ಪ್ರೈಮ್‌, ಸಂಗಮ್‌ ಸೇರಿದಂತೆ ಹಲವು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಓಡಾಡಿದೆ. ₹6,500 ಕೇಳಿದರು’ ಎಂದು ಜಯನಗರದ ಮೌನೇಶ್‌ ಹೇಳಿದರು.

‘ಇಂಡೆಕ್ಸ್‌ ಮತ್ತಿತರ ಲ್ಯಾಬ್‌ಗಳಲ್ಲಿ ₹3,500ಕ್ಕೆ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಒಂದೊಂದು ಲ್ಯಾಬ್‌ ಒಂದೊಂದು ರೀತಿಯಲ್ಲಿ ದರ ಹೇಳುತ್ತೇವೆ. ಖಾಸಗಿ ಲ್ಯಾಬ್‌ಗಳಲ್ಲಿ ನಿಶ್ಚಿತ ದರ ನಿಗದಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಮೂರು ದಿನ ಕಾಯುವಿಕೆ:

ಖಾಸಗಿ ಲ್ಯಾಬ್‌ಗಳಲ್ಲಿ ಹೀಗೆ ಇಷ್ಟ ಬಂದಷ್ಟು ಹಣ ಕೇಳುತ್ತಿದ್ದರೆ, ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ ₹5ಕ್ಕೆ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಸ್ಕ್ಯಾನಿಂಗ್‌ನ ಪೂರ್ಣ ವರದಿ ಬೇಕಿದ್ದರೆ ₹150 ಪಾವತಿಸಬೇಕು. ಅಂದರೆ, ₹155ರಲ್ಲಿ ಸಿಟಿ ಸ್ಕ್ಯಾನ್ ವರದಿ ಸಹಿತ ಸೌಲಭ್ಯ ಇಲ್ಲಿ ಸಿಗುತ್ತಿದೆ.

ಈ ಸೌಲಭ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅರವಿಂದ್ ಎನ್ನುವರು ವಿಡಿಯೊ ಪೋಸ್ಟ್‌ ಮಾಡುತ್ತಿದ್ದಂತೆ ನೂರಾರು ಜನ ಜಯನಗರ ಸಾರ್ವಜನಿಕ ಆಸ್ಪತ್ರೆಯತ್ತ ಧಾವಿಸಿದ್ದಾರೆ. ದಿನಕ್ಕೆ 50 ಟೋಕನ್‌ ಮಾತ್ರ ವಿತರಿಸಲಾಗುತ್ತಿದೆ. ಆಯಾ ದಿನವೇ ಟೋಕನ್‌ ಸಿಗದಿದ್ದರೆ ಮರುದಿನ, ಅದರ ಮರುದಿನ ಆಸ್ಪತ್ರೆಗೆ ಬರುತ್ತಿದ್ದಾರೆ. ’ಮೂರು ದಿನ ಕಾಯ್ದು ಸ್ಕ್ಯಾನ್ ಮಾಡಿಸಿಕೊಳ್ಳಬೇಕಾಗಿದೆ‘ ಎಂದು ಸಾರ್ವಜನಿಕರು ಹೇಳುತ್ತಾರೆ.

ಹೊರ ರೋಗಿಗಳ ವಿಭಾಗದ ಅರ್ಜಿ ತೆಗೆದುಕೊಂಡು ಅದನ್ನು ಭರ್ತಿ ಮಾಡಿ, ಸ್ಕ್ಯಾನ್ ಮಾಡಿಸಬೇಕಾದ ಅಗತ್ಯದ ಬಗ್ಗೆ ವೈದ್ಯರಿಂದ ಟಿಪ್ಪಣಿ ಬರೆಸಿಕೊಂಡು, ಎಕ್ಸ್‌ರೇ ಮಾಡಿಸಿ ಕೊನೆಗೆ ಸ್ಕ್ಯಾನ್‌ ಮಾಡಿಸಬೇಕಾಗುತ್ತದೆ. ಇದಕ್ಕೆ ಕನಿಷ್ಠ 4 ತಾಸಿನಿಂದ 5 ತಾಸು ಸಮಯ ಹಿಡಿಯುತ್ತಿದೆ. ಸರದಿ ಉದ್ದವಿದ್ದಷ್ಟೂ ಕಾಯುವ ಸಮಯವೂ ಹೆಚ್ಚಾಗುತ್ತಾ ಹೋಗುತ್ತಿದೆ.

‘ವಿಡಿಯೊ ಮಾಡಿದ ವ್ಯಕ್ತಿಯೊಬ್ಬರು ಜಯನಗರದ ಸಾರ್ವಜನಿಕ ಆಸ್ಪತ್ರೆ ಎನ್ನುವ ಬದಲು ಸಂಜಯಗಾಂಧಿ ಆಸ್ಪತ್ರೆ ಎಂದು ಹೇಳಿದ್ದಾರೆ. ನಮಗೆ ನಿತ್ಯ ಸಾವಿರಾರು ಕರೆಗಳು ಬರುತ್ತಿವೆ. ಉಚಿತವಾಗಿ ಸ್ಕ್ಯಾನ್ ಮಾಡುತ್ತೀರಾ ಎಂದು ವಿಚಾರಿಸುತ್ತಾರೆ. ಆದರೆ, ನಮ್ಮದು ಕೋವಿಡ್ ಆಸ್ಪತ್ರೆಯಲ್ಲ.  ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ₹2000ಕ್ಕೆ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಶೇ 50ರಷ್ಟು ವಿನಾಯಿತಿ ಇದೆ’ ಎಂದು ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ. ಎಚ್.ಎಸ್. ಚಂದ್ರಶೇಖರ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು