ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಸಣ್ಣ ಪ್ರಾಣಿಗಳ ಶುಶ್ರೂಷಕ ವಲಯವೂ ಸಾಕಷ್ಟು ಸವಾಲು ಎದುರಿಸಿತ್ತು. ಶ್ವಾನಗಳು, ಬೆಕ್ಕುಗಳಂತಹ ಪ್ರಾಣಿಗಳು ಅನಾರೋಗ್ಯಕ್ಕೀಡಾಗಿದ್ದಾಗ ಅವುಗಳಿಗೆ ಚಿಕಿತ್ಸೆ ನೀಡುವುದು, ಪ್ರಾಣಿಪ್ರಿಯರ ನಡುವೆ ಅಂತರ ಕಾಪಾಡಿಕೊಳ್ಳುವುದು ಕಷ್ಟವಾದಾಗ, ಆಸ್ಪತ್ರೆಯನ್ನೇ ಸ್ಥಳಾಂತರಿಸಿ, ಅತ್ಯಾಧುನಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ ಕ್ಯೂಪಾ (ಕಂಪ್ಯಾಶನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್).
ಇಲ್ಲಿನ ಆರ್.ಟಿ. ನಗರ ಮುಖ್ಯರಸ್ತೆಯಲ್ಲಿ ಕ್ಯೂಪಾದ ಸಣ್ಣ ಪ್ರಾಣಿಗಳ ವಿಶೇಷ ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ಮೊದಲು, ದೇವೇಗೌಡ ರಸ್ತೆಯಲ್ಲಿದ್ದ ಈ ಆಸ್ಪತ್ರೆ, ಕೋವಿಡ್ ಸಂದರ್ಭದಲ್ಲಿ ಪ್ರಾಣಿಗಳ ಚಿಕಿತ್ಸೆ ದುಸ್ತರವಾದಾಗ, ಈಗಿನ ಈ ಸ್ಥಳದಲ್ಲಿ 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.
‘ಹಿಂದಿಗಿಂತಲೂ ಈಗ (ಕೋವಿಡ್ ಸಂದರ್ಭ) ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಪ್ರಾಣಿಗಳ ಆರೋಗ್ಯ ಸ್ಥಿತಿ ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚು ಗಮನ ಕೊಡಬೇಕಾಗುತ್ತದೆ. ಈ ಹಿಂದಿನ ಆಸ್ಪತ್ರೆ ಚಿಕ್ಕದಾಗಿದ್ದು, ಕಷ್ಟವಾಗುತ್ತಿತ್ತು. ಸಾಕು ಪ್ರಾಣಿಗಳಿಗೆ ಅನಾರೋಗ್ಯ ತಪ್ಪಿದಾಗ ಅದರ ಜೊತೆ ಮೂರು–ನಾಲ್ಕು ಜನ ಬಂದು ಬಿಡುತ್ತಿದ್ದರು. ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನೇ ಸ್ಥಳಾಂತರಿಸಿ, ವಿಶಾಲ ಜಾಗದ ವ್ಯವಸ್ಥೆ ಮಾಡಿದ್ದೇವೆ. ಜ.14ರಿಂದ ಈ ಸ್ಥಳದಲ್ಲಿ ಆಸ್ಪತ್ರೆ ತೆರೆಯಲಾಗಿದೆ’ ಎಂದು ಕ್ಯೂಪಾದ ಆರ್.ಟಿ. ನಗರ ಆಸ್ಪತ್ರೆ ಉಸ್ತುವಾರಿ ಕರ್ನಲ್ ಎಂ. ಜಗದೀಶ್ ಹೇಳಿದರು.
‘ದಿನಕ್ಕೆ 70ರಿಂದ 80 ಪ್ರಾಣಿಗಳು ಚಿಕಿತ್ಸೆಗಾಗಿ ಬರುತ್ತವೆ. ಎಂಟಕ್ಕೂ ಹೆಚ್ಚು ವೈದ್ಯರು ಇದ್ದು, 20 ಸಹಾಯಕರು ಇದ್ದಾರೆ. ಬೇರೆ ಪ್ರಾಣಿ ಚಿಕಿತ್ಸಾ ಕೇಂದ್ರಗಳಿಗೆ ಹೋಲಿಸಿದರೆ, ವೈದ್ಯಕೀಯ ಶುಲ್ಕ ತುಂಬಾ ಕಡಿಮೆ ನಿಗದಿ ಮಾಡಲಾಗಿದೆ. ನಿಯಮಿತ ಆರೋಗ್ಯ ತಪಾಸಣೆಗೆ ₹100 ಹಾಗೂ ಶಸ್ತ್ರ ಚಿಕಿತ್ಸೆಯಂತಹ ಕಾರ್ಯಗಳಿಗೆ ₹1,000ದಿಂದ ₹2,000 ತೆಗೆದುಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.
ಲಾಭದಾಯಕವಲ್ಲದ ಸಂಸ್ಥೆ:‘ಕ್ಯೂಪಾ’ ಒಂದು ಲಾಭದಾಯಕವಲ್ಲದ, ಸರ್ಕಾರೇತರ ಸಂಸ್ಥೆ. ಬೀದಿನಾಯಿಗಳು, ದನಗಳು, ಇತ್ಯಾದಿ ಪ್ರಾಣಿಗಳ ಪೋಷಣೆ, ಜನರು ಸಾಕಲು ಆಗದೇ ತಂದು ಬಿಟ್ಟ ಶ್ವಾನಗಳ ರಕ್ಷಣೆ, ವಯಸ್ಸಾದ ಸಣ್ಣ ಪ್ರಾಣಿಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದೇವೆ. ನಗರದ ಆರು ಕಡೆಗಳಲ್ಲಿ ನಮ್ಮ ಕೇಂದ್ರಗಳಿವೆ. ಆರ್.ಟಿ. ನಗರದ ಕ್ಲಿನಿಕ್‌ನಿಂದ ಬಂದ ಆದಾಯವನ್ನು ಈ ಕೇಂದ್ರಗಳ ನಿರ್ವಹಣೆಗೆ ಬಳಸುತ್ತಿದ್ದೇವೆ’ ಎಂದು ಕ್ಯೂಪಾ ಟ್ರಸ್ಟಿ ಡಾ. ಶೀಲಾ ರಾವ್ ಹೇಳಿದರು.
‘ಇಂಗ್ಲೆಂಡ್‌ನ ಮಹಿಳೆ ಕ್ರಿಸ್ಟಲ್ ರೋಜರ್ಸ್ ಬೆಂಗಳೂರಿನಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಿದರು. ಅವರ ಜೊತೆ ನಾನು, ಸುಪರ್ಣಾ ಗಂಗೂಲಿ ಈ ಟ್ರಸ್ಟ್ ರಚಿಸಿದೆವು. 30 ವರ್ಷಗಳಿಂದ ಕ್ಯೂಪಾ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಇರುವ ಸೌಲಭ್ಯ
*ಎಕ್ಸ್–ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್
*ಇಸಿಜಿ
*ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ
*ಲಸಿಕೆಗಳು
*ರಕ್ತ ಪರೀಕ್ಷೆ ವ್ಯವಸ್ಥೆ
*ಕೇಶವಿನ್ಯಾಸ ಸೌಲಭ್ಯ
ಕ್ಯೂಪಾದ ಇತರೆ ಕೇಂದ್ರಗಳು
*ಹೆಬ್ಬಾಳ– ಅಪಘಾತಕ್ಕೊಳಗಾದ/ಬೀದಿ ನಾಯಿಗಳ ರಕ್ಷಣಾ ಕೇಂದ್ರ
*ದೊಮ್ಮಸಂದ್ರ– ಸಾಕಲು ಆಗದೆ ತಂದು ಬಿಟ್ಟ ಶ್ವಾನಗಳ ರಕ್ಷಣಾ ಕೇಂದ್ರ
*ಕೆಂಗೇರಿ– ದೊಡ್ಡ ಪ್ರಾಣಿಗಳ ಪುನರ್ವಸತಿ ಕೇಂದ್ರ
*ಮೈಲಪ್ಪನಹಳ್ಳಿ– ವಯಸ್ಸಾದ ಪ್ರಾಣಿಗಳ ಕೇಂದ್ರ
*ಚಾಮರಾಜಪೇಟೆ– ಬೀದಿನಾಯಿಗಳ ಸಂತಾನಶಕ್ತಿ ಹರಣ ಕೇಂದ್ರ
*ಹಲಸೂರಿನಲ್ಲಿ ಆಡಳಿತ ಕೇಂದ್ರವಿದೆ.
***
ಸಣ್ಣ ಪ್ರಾಣಿಗಳಲ್ಲಿ ಜ್ವರ, ಚರ್ಮದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಪಘಾತ ಪ್ರಕರಣಗಳೂ ಬರುತ್ತಿವೆ. ಎಕ್ಸ್‌ರೇ– ಸ್ಕ್ಯಾನ್ ಸೇರಿದಂತೆ ಎಲ್ಲ ಸೌಲಭ್ಯ ಇರುವುದರಿಂದ ಸುಲಭವಾಗಿ ಸಮಸ್ಯೆ ತಿಳಿದು ಚಿಕಿತ್ಸೆ ನೀಡಲು ಅನುಕೂಲವಾಗಿದೆ
- ಡಾ. ಅನ್ವಿತಾ, ವೈದ್ಯೆ
***
ವೈದ್ಯರು, ಸಿಬ್ಬಂದಿ ತುಂಬಾ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಪ್ರಾಣಿಗಳಿಗೂ ಅತ್ಯುತ್ತಮ ಚಿಕಿತ್ಸೆ ನೀಡುತ್ತಾರೆ. 20 ಕಿ.ಮೀ. ದೂರದಿಂದಲೂ ಪ್ರಾಣಿಗಳನ್ನು ಇಲ್ಲಿಗೆ ಕರೆ ತರುವುದನ್ನು ನೋಡಿದ್ದೇನೆ. ಚಿಕಿತ್ಸಾ ಶುಲ್ಕವೂ ಕಡಿಮೆ ಇದೆ.
- ವನಜಾ, ಪ್ರಾಣಿಪ್ರಿಯರು
ಸಂಪರ್ಕಕ್ಕೆ: 83771–67314.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.