ಶನಿವಾರ, ಆಗಸ್ಟ್ 13, 2022
22 °C

ಕೋವಿಡ್‌: ಲಕ್ಷದತ್ತ ಗುಣಮುಖರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರಲ್ಲಿ 1,732 ಮಂದಿ ಶುಕ್ರವಾರ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ ಲಕ್ಷದ ಗಡಿಯತ್ತ (97,926) ದಾಪುಗಾಲು ಇರಿಸಿದೆ. 

ನಗರದಲ್ಲಿ ಮಾ.8ರಂದು ಪ್ರಥಮ ಪ್ರಕರಣ ವರದಿಯಾದರೂ ಮೇ ಅಂತ್ಯದವರೆಗೆ ಸೋಂಕು  (358) ನಿಯಂತ್ರಣದಲ್ಲಿತ್ತು. ಬಳಿಕ ಕೋವಿಡ್‌ ಪೀಡಿತರ ಸಂಖ್ಯೆ ಏರಿಕೆ ಕಂಡಿದೆ. ಅದೇ ರೀತಿ, ಗುಣಮುಖರ ಸಂಖ್ಯೆ ಕೂಡ ಈಗ ಹೆಚ್ಚಳವಾಗುತ್ತಿದೆ. ಆಗಸ್ಟ್‌ ತಿಂಗಳಲ್ಲಿ 73,147 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 2,359 ಮಂದಿ ಗುಣಮುಖರಾಗಿದ್ದಾರೆ. ಸದ್ಯ 41 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  

ನಗರದಲ್ಲಿ ಹೊಸದಾಗಿ 2,963 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.41 ಲಕ್ಷ ದಾಟಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 25 ಮಂದಿ ಮೃತಪಟ್ಟಿರುವುದು  ದೃಢಪಟ್ಟಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 2,091ಕ್ಕೆ ಏರಿಕೆಯಾಗಿದೆ. ಸದ್ಯ ಮರಣ ಪ್ರಮಾಣ ದರ ಶೇ 1.49ರಷ್ಟಿದೆ. ಕೆಲ ದಿನಗಳಿಂದ ಪ್ರತಿನಿತ್ಯ 30 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ನಗರದಲ್ಲಿ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 10 ಲಕ್ಷ ದಾಟಿದೆ. 

ಸದ್ಯ ನಗರದಲ್ಲಿ ಸೋಂಕು ದೃಢಪಡುವ ಪ್ರಮಾಣ ಶೇ 14.64 ರಷ್ಟಿದೆ. ಹತ್ತು ದಿನಗಳಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 23ರಷ್ಟು ಪ್ರಕರಣಗಳು ಪಶ್ಚಿಮ ವಲಯಕ್ಕೆ ಸೇರಿವೆ. ದಕ್ಷಿಣ ವಲಯದಲ್ಲಿ ಶೇ 17 ರಷ್ಟು ಹಾಗೂ ಪೂರ್ವ ವಲಯದಲ್ಲಿ ಶೇ 14 ರಷ್ಟು ಪ್ರಕರಣಗಳು ವರದಿಯಾಗಿವೆ. ಬೊಮ್ಮನಹಳ್ಳಿ ವಲಯದಲ್ಲಿ ಶೇ 16 ರಷ್ಟು ಪ್ರಕರಣಗಳು ವರದಿಯಾಗಿವೆ.

27 ದಿನಗಳಲ್ಲಿ ದುಪ್ಪಟ್ಟು: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲು 27 ದಿನಗಳನ್ನು ತೆಗೆದುಕೊಳ್ಳುತ್ತಿದೆ. ಸದ್ಯ 1.78 ಲಕ್ಷ ಮಂದಿ ಮನೆ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 93.6ರಷ್ಟು ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿಲ್ಲ. ಶೇ 6.4ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳು ಗೋಚರಿಸಿವೆ. ಪ್ರತಿ 10 ಲಕ್ಷ ಮಂದಿಗೆ 26,310 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

‘ಸರ್ಕಾರ ನಿಗದಿಪಡಿಸಿದ ದರ ನಮೂದಿಸಿ’

ಸರ್ಕಾರದ ಶಿಫಾರಸಿನ ಅನುಸಾರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದಲ್ಲಿ ಸರ್ಕಾರ ನಿಗದಿಪಡಿಸಿದಷ್ಟೇ ದರವನ್ನು ನಮೂದಿಸಿ, ಕ್ಲೇಮು ಮಾಡಬೇಕು ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದೆ.

ಕೆಲ ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ನಮೂದಿಸಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಕ್ಲೇಮು ಸಲ್ಲಿಸಿದ್ದವು. ಹೀಗಾಗಿ ಅಂತಹ ಆಸ್ಪತ್ರೆಗಳ ಕ್ಲೇಮುಗಳನ್ನು ಟ್ರಸ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಫಾನಾ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ರವಾನಿಸಿದ್ದು, ‘ಐಸಿಯು, ಸಾಮಾನ್ಯ ವಾರ್ಡ್ ಸೇರಿದಂತೆ ಪ್ರತಿ ವಿಭಾಗಕ್ಕೂ ಸರ್ಕಾರವು ಸೋಂಕಿತರಿಗೆ ನಿಗದಿಪಡಿಸಿರುವ ದರವನ್ನೇ ದಾಖಲಿಸುಬೇಕು’ ಎಂದು ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು