ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ್‌ ಅಂಗಳದಲ್ಲಿ ಕನ್ನಡದ ಮಕ್ಕಳು

Last Updated 1 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆನೆ, ಟೂತ್‌ ಪೇಸ್ಟ್‌ ಬಳಸಿದರೆ ಹೇಗಿರಬಹುದು? ಬುರುಗು ನೊರೆ ಆಗಲೇ ಸರ್ರನೆ ಹರಿದು ಬಂತು. ಆನೆಗೆ ಇಷ್ಟೊಂದು ಪೇಸ್ಟ್‌ ಬೇಕಾಗುತ್ತಾ ಎಂದು ಬಾಯಗಲಿಸಿ ಮುಗ್ಧವಾಗಿ ಚಿಣ್ಣರು ಅಚ್ಚರಿ ವ್ಯಕ್ತಪಡಿಸಿದರು.

ಪಾರದರ್ಶಕ ಪ್ಲಾಸ್ಟಿಕ್‌ (ಸ್ಪೆಕ್ಟ್ರಂ ಷೀಟ್‌) ಹಾಳೆಗಳನ್ನು ಒಂದರ ಹಿಂದೆ ಇನ್ನೊಂದನ್ನು ಇಟ್ಟು ತಿರುವಿದಾಗ ಕಪ್ಪಾಗಿಬಿಟ್ಟಿತು. ಇದೇ ಎರಡು ಹಾಳೆಗಳ ನಡುವೆ ಅಭ್ರಕವನ್ನಿಟ್ಟಾಗ ಮತ್ತೆ ಪಾರದರ್ಶಕವಾಯಿತು. ಏಳು ಬಣ್ಣಗಳು ಮೂಡಿದವು. ಹೀಗೆ ಭೌತ ವಿಜ್ಞಾನದ ಒಂದೊಂದು ಸರಳ ಪ್ರಯೋಗಗಳು ಈ ಮಕ್ಕಳ ಕಣ್ಣಲ್ಲಿ ಬೆರಗು ಮೂಡಿಸಿದವು.

ಇದು ಕನ್ನಡ ಶಾಲೆಗಳ ಮಕ್ಕಳಿಗೆ ಕನ್ನಡದಲ್ಲೇ ವಿಜ್ಞಾನ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡ‘ಅರಿವಿನ ಅಂಗಳ’ ಕಾರ್ಯಕ್ರಮದ ಝಲಕ್‌.

ಬನವಾಸಿ ಬಳಗ, ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸ್‌ ಟ್ರಸ್ಟ್‌, ವಿಜ್ಞಾನ ಉತ್ಸವ ಸಂಘಟನೆಗಳು ಈ ಪ್ರಯತ್ನಕ್ಕೆ ಮುಂದಾಗಿವೆ. ನಗರದ ಸಿ.ವಿ.ರಾಮನ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಆವರಣದಲ್ಲಿ ನಗರದ ಏಳು ಕನ್ನಡ ಶಾಲೆಗಳ ತಲಾ 7 ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಪಕ್ಷಿನೋಟ ನೀಡಲಾಯಿತು.

ಪಠ್ಯ ಜಗತ್ತಿನಿಂದಾಚೆಗೆ ವಿಜ್ಞಾನ ಪರಿಚಯಿಸುವ ಪ್ರಯತ್ನವಿದು. ಸರಳ ಪ್ರಯೋಗಗಳ ಮೂಲಕ ರಾಸಾಯನಿಕ ಕ್ರಿಯೆಗಳ ಪರಿಚಯ, ಆಟದ ಮೂಲಕ ವಿಜ್ಞಾನ ಬೋಧನೆ, ಮನೆಯಲ್ಲೇ ನಿತ್ಯ ನಡೆಸುವ ಚಟುವಟಿಕೆಗಳಲ್ಲಿ ಕಾಣುವ ವಿಜ್ಞಾನವನ್ನು (ಅರಶಿನಕ್ಕೆ ಕುಂಕುಮ ಬೆರೆಸಿದಾಗ ಸೃಷ್ಟಿಯಾಗುವ ಬೇರೆಯದೇ ಬಣ್ಣ, ಉಪ್ಪಿಗೆ ಮೊಸರು ಬೆರೆತಾಗ ಅದು ನೀಲಿ ಬಣ್ಣಕ್ಕೆ ತಿರುಗಿ ಅಯೋಡಿನ್‌ ಅಂಶ ಕಾಣುವುದು....) ಮಕ್ಕಳ ಮುಂದೆ ತಜ್ಞರು ಪ್ರದರ್ಶಿಸಿದರು. ಬೆರಗುಗಣ್ಣುಗಳಿಂದ ಮಕ್ಕಳು ವೀಕ್ಷಿಸಿದರು.

ಮುಂದೆ ಸಿ.ವಿ.ರಾಮನ್‌ ವಸ್ತು ಸಂಗ್ರಹಾಲಯದೊಳಗೆ ಮಕ್ಕಳು ಸುತ್ತಾಡಿದರು. ರಾಮನ್‌ ಅವರೇ ಜಗತ್ತಿನ ವಿವಿಧ ಮೂಲೆಗಳಿಂದ ಸಂಗ್ರಹಿಸಿದ ಶಿಲೆ, ಕಲ್ಲು, ಹರಳು, ಲೋಹ, ಗಾಜಿನಂತಹ ಅಪರೂಪದ ವಸ್ತುಗಳನ್ನು ವೀಕ್ಷಿಸಿದರು. ರಾಮನ್‌ ಅವರಿಗೆ ನೊಬೆಲ್‌ ಪಾರಿತೋಷಕ ತಂದ ‘ರಾಮನ್‌ ಉಪಕರಣ’ವನ್ನೂ (ಬೆಳಕಿನ ವಕ್ರೀಭವನ ಸಂಬಂಧಿಸಿ ಸಂಶೋಧನೆಗೆ ಬಳಸಿದ ಉಪಕರಣ) ನೋಡಿದರು. ಅಲ್ಲಿ ವಸ್ತು ಸಂಗ್ರಹಾಲಯದ ಅಧಿಕಾರಿ ಶಶಿ ಅವರು ಬೆಳಕಿನ ಚಲನೆ, ಅದರಿಂದಾಗುವ ಪರಿಣಾಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಬನವಾಸಿ ಬಳಗದ ಪ್ರಶಾಂತ್‌, ವಸಂತ್‌, ರೇಖಾ ಎಂ., ಟ್ಯಾಕ್ಟ್‌ ಸಂಸ್ಥೆಯ ಶುಭಂಕರ್‌ ಬಿಸ್ವಾಸ್‌ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.ಬಳಿಕ ನಡೆದ ವಿಜ್ಞಾನ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಜಯನಗರದ ವಿಜಯಾ ಶಾಲೆ ಪ್ರಥಮ ಹಾಗೂ ಎಂಇಎಸ್‌ ಶಾಲೆ ದ್ವಿತೀಯ ಬಹುಮಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT