ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಎಂಜಿನಿಯರ್, ವಕೀಲೆ, ವೃದ್ಧನಿಗೆ ₹ 3 ಕೋಟಿ ವಂಚನೆ

Published 11 ಏಪ್ರಿಲ್ 2024, 16:00 IST
Last Updated 11 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ಡ್ರಗ್ಸ್ ಸಾಗಣೆ ಹಾಗೂ ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗುವುದು’ ಎಂದು ಬೆದರಿಸಿ ನಗರದ ಎಂಜಿನಿಯರ್, ವಕೀಲೆ ಹಾಗೂ ವೃದ್ಧರೊಬ್ಬರಿಂದ ₹ 3.07 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ನಗರದ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

‘ಮುಂಬೈ, ದೆಹಲಿ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ್ದ ವಂಚಕರು, ಎಂಜಿನಿಯರ್, ವಕೀಲೆ, ವೃದ್ಧನಿಂದ ಹಣ ಪಡೆದು ನಾಪತ್ತೆಯಾಗಿದ್ದಾರೆ. ವಕೀಲೆಗೆ ಕರೆ ಮಾಡಿದ್ದ ವಂಚಕರು, ಅರೆನಗ್ನ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವುದು ಗೊತ್ತಾಗಿದೆ. ಮೂವರು ನೀಡಿರುವ ದೂರು ಆಧರಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ: ‘ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಎಂಜಿನಿಯರ್, ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಇತ್ತೀಚೆಗೆ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿನಲ್ಲಿ ಹೊರ ದೇಶಕ್ಕೆ ಕೊರಿಯರ್ ಸಾಗಿಸಲಾಗುತ್ತಿದೆ. ಇದರಲ್ಲಿ ಡ್ರಗ್ಸ್, ನಕಲಿ ಪಾಸ್‌ಪೋರ್ಟ್ ಹಾಗೂ ನಕಲಿ ಬ್ಯಾಂಕ್ ಎಟಿಎಂ ಕಾರ್ಡ್‌ಗಳು ಇವೆ’ ಎಂಬುದಾಗಿ ಬೆದರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಡ್ರಗ್ಸ್ ಸಾಗಣೆ ಹಾಗೂ ಅಕ್ರಮ ಚಟುವಟಿಕೆ ಸಂಬಂಧ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಕೆಲ ಕಾನೂನು ಪ್ರಕ್ರಿಯೆ ನಡೆಸಬೇಕು. ನಾವು ಕಳುಹಿಸುವ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಳ್ಳಿ. ಇಲ್ಲದಿದ್ದರೆ, ನಿಮ್ಮ ಮನೆ ಅಥವಾ ಕಚೇರಿಗೆ ಬಂದು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು. ಹೆದರಿದ್ದ ಎಂಜಿನಿಯರ್, ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡಿದ್ದರು.’

‘ಆ್ಯಪ್‌ ಮೂಲಕ ಆರೋಪಿಗಳಿಗೆ ವಿಡಿಯೊ ಕರೆ ಮಾಡಿದ್ದರು. ಪೊಲೀಸ್ ಸಮವಸ್ತ್ರದಲ್ಲಿದ್ದ ಆರೋಪಿ, ‘ಪ್ರಕರಣ ದಾಖಲಾದರೆ ನೀವು ಜೈಲಿಗೆ ಹೋಗುವುದು ನಿಶ್ಚಿತ. ಹಣ ನೀಡಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ’ ಎಂದಿದ್ದ. ಅದನ್ನು ನಂಬಿದ್ದ ಎಂಜಿನಿಯರ್, ಆರೋಪಿ ನೀಡಿದ್ದ 8 ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 2.42 ಕೋಟಿ ಹಾಕಿದ್ದ. ಆರೋಪಿಗಳು ಪುನಃ ಹಣ ಕೇಳಿದಾಗ, ಅನುಮಾನ ಬಂದು ಸ್ನೇಹಿತರ ಜೊತೆ ಚರ್ಚಿಸಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಹೆಸರಿನಲ್ಲಿ ವಂಚನೆ: ‘ನಗರದ 70 ವರ್ಷದ ವೃದ್ಧನಿಗೆ ಕರೆ ಮಾಡಿದ್ದ ವಂಚಕ, ‘ನಾನು ಆದಾಯ ತೆರಿಗೆ ಅಧಿಕಾರಿ. ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ವಿಚಾರಣೆ ನಡೆಸಬೇಕು’ ಎಂದಿದ್ದ. ಹೆದರಿದ್ದ ವೃದ್ಧ, ವೈಯಕ್ತಿಕ ಮಾಹಿತಿ ಹಂಚಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಕ್ರಮ ವಹಿವಾಟು ನಡೆದಿದ್ದು, ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ಪ್ರಕರಣ ದಾಖಲಿಸಬಾರದೆಂದರೆ, ಕೆಲ ಪ್ರಕ್ರಿಯೆ ನಡೆಸಬೇಕು. ಇದಕ್ಕಾಗಿ ನೋಂದಣಿ ಹಾಗೂ ಇತರೆ ಶುಲ್ಕ ಪಾವತಿಸಬೇಕು’ ಎಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ವೃದ್ಧ, ಹಂತ ಹಂತವಾಗಿ ₹ 69 ಲಕ್ಷ ನೀಡಿದ್ದರು. ಪುನಃ ಹಣ ಕೇಳಿದಾಗ, ಅನುಮಾನಗೊಂಡ ವೃದ್ಧ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

‘ಅರೆನಗ್ನ ವಿಡಿಯೊ: ವಕೀಲೆಗೆ ಬ್ಲ್ಯಾಕ್‌ಮೇಲ್’

‘29 ವರ್ಷದ ವಕೀಲೆಗೆ ಫೆಡೆಕ್ಸ್ ಕೊರಿಯರ್ ಕಂಪನಿ ಪ್ರತಿನಿಧಿ ಸೋಗಿನಲ್ಲಿ ಏಪ್ರಿಲ್ 3ರಂದು ವಂಚಕ ಕರೆ ಮಾಡಿದ್ದ. ‘ನಿಮ್ಮ ಹೆಸರಿನಲ್ಲಿ ಹೊರದೇಶಕ್ಕೆ ಕೊರಿಯರ್ ಹೊರಟಿದೆ. ಅದರಲ್ಲಿ ಡ್ರಗ್ಸ್ ಹಾಗೂ ಇತರೆ ನಿಷೇಧಿತ ವಸ್ತುಗಳಿವೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಮುಂಬೈ ಸೈಬರ್ ಕ್ರೈಂ ಪೊಲೀಸರ ಜೊತೆ ಮಾತನಾಡಿ’ ಎಂಬುದಾಗಿ ಹೇಳಿ ಬೇರೆಯವರಿಗೆ ಕರೆ ವರ್ಗಾಯಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪೊಲೀಸರ ಸೋಗಿನಲ್ಲಿ ಮಾತನಾಡಿದ್ದ ಮತ್ತೊಬ್ಬ ವಂಚಕ, ಆ್ಯಪ್‌ ಇನ್‌ಸ್ಟಾಲ್ ಮಾಡಿಸಿದ್ದ. ವಿಡಿಯೊ ಕರೆ ಮಾಡುವಂತೆ ವಕೀಲೆಗೆ ಹೇಳಿದ್ದ. ಹೆದರಿದ್ದ ವಕೀಲೆ, ವಿಡಿಯೊ ಕರೆ ಮಾಡಿದ್ದರು. ‘ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದರಲ್ಲಿ ನಿಮ್ಮ ಹೆಸರು ಇದೆ. ಇಡೀ ದಿನ ವಿಡಿಯೊ ಕರೆ ಆನ್ ಇರಬೇಕು. ನಿಮ್ಮ ಮೇಲೆ ನಿಗಾ ವಹಿಸಲಾಗಿದೆ’ ಎಂದಿದ್ದ. ಅದನ್ನೂ ನಂಬಿದ್ದ ವಕೀಲೆ, ವಿಡಿಯೊ ಆನ್‌ ಇರಿಸಿದ್ದರು’ ಎಂದು ತಿಳಿಸಿವೆ.

‘ಮರುದಿನ ಆರೋಪಿ ಪುನಃ ಕರೆ ಮಾಡಿದ್ದ. ಪ್ರಕರಣ ಅಂತ್ಯಗೊಳಿಸಲು ಹಣ ಕೇಳಿದ್ದ. ಆದರೆ, ಹಣ ವರ್ಗಾವಣೆ ಆಗಿರಲಿಲ್ಲ. ಪುನಃ ಕರೆ ಮಾಡಿದ್ದ ಆರೋಪಿ, ‘ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಬೇಕು. ಬಟ್ಟೆ ಬಿಚ್ಚಿ ಅರೆನಗ್ನವಾಗಿ ನಿಲ್ಲಬೇಕು. ಇಲ್ಲದಿದ್ದರೆ, ನಿಮ್ಮ ಮನೆಗೆ ಬಂದು ಬಂಧಿಸುತ್ತೇವೆ’ ಎಂದಿದ್ದ. ಹೆದರಿದ್ದ ವಕೀಲೆ, ಆರೋಪಿ ಹೇಳಿದಂತೆ ಮಾಡಿದ್ದರು. ಅದೇ ವಿಡಿಯೊವನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದ.’

‘ಅರೆನಗ್ನ ವಿಡಿಯೊವನ್ನು ವಕೀಲೆಗೆ ಕಳುಹಿಸಿದ್ದ ಆರೋಪಿ, ಹಣಕ್ಕಾಗಿ ಬೇಡಿಕೆ ಇರಿಸಿದ್ದ. ಹಣ ನೀಡದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ. ಹೆದರಿದ್ದ ವಕೀಲೆ, ಹಂತ ಹಂತವಾಗಿ ₹ 14 ಲಕ್ಷ ನೀಡಿದ್ದರು. ಪುನಃ ಹಣ ಕೇಳಿದಾಗ ಬೇಸತ್ತು ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಯಾವುದೇ ಕರೆಗೂ ಹೆದರಬೇಡಿ: ದೂರು ನೀಡಿ’

‘ಫೆಡೆಕ್ಸ್ ಹಾಗೂ ಇತರೆ ಕೊರಿಯರ್ ಕಂಪನಿ ಹೆಸರಿನಲ್ಲಿ ಬರುವ ಕರೆಗಳಿಗೆ ಹೆದರಬೇಡಿ. ಡ್ರಗ್ಸ್ ಹಾಗೂ ಇತರೆ  ಯಾವುದೇ ಪ್ರಕರಣದಲ್ಲಿ ನಿಮ್ಮ ಹೆಸರು ಇರುವುದಾಗಿ ಯಾರಾದರೂ ಬ್ಲ್ಯಾಕ್‌ಮೇಲ್ ಮಾಡಿದರೆ ಠಾಣೆಗೆ ದೂರು ನೀಡಿ. ಸಹಾಯವಾಣಿ– 1930ಕ್ಕೆ ಕರೆ ಮಾಡಿ ಮಾಹಿತಿ ದಾಖಲಿಸಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸೈಬರ್ ವಂಚನೆಗಳ ಬಗ್ಗೆ ಜನರು ಜಾಗೃತಿ ವಹಿಸಬೇಕು. ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಅಪರಿಚಿತರು ಕಳುಹಿಸುವ ಲಿಂಕ್ ಮೂಲಕ ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT