ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷತೆಗಾಗಿ ‘ಸೈಕಲ್ ಜಾಥಾ’

Last Updated 16 ಫೆಬ್ರುವರಿ 2021, 21:48 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಹುಳಿಮಾವುವರೆಗೆ ಮಂಗಳವಾರ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸುತ್ತಮುತ್ತಲ ಶಾಲೆಗಳ ನೂರಾರು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಕುರಿತ ಭಿತ್ತಿಪತ್ರಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಇದಕ್ಕೂ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಆಯುಕ್ತ ಎನ್.ಶಿವಕುಮಾರ್. ‘ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ದಿನಕ್ಕೆ 7 ಜನರಂತೆ ಸಾಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಸಂಚಾರ ನಿಯಮಗಳ ಉಲ್ಲಂಘನೆಯೇ ಇದಕ್ಕೆ ಕಾರಣ‘ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸತೀಶ್ ರೆಡ್ಡಿ ‘ರಸ್ತೆ ಅಪಘಾತಗಳಿಂದಾಗುವ ಸಾವು ನೋವು ಕುಟುಂಬ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಜಾಗರೂಕತೆ ಸಂಚಾರ ಇತರರ ಪ್ರಾಣಕ್ಕೂ ಕುತ್ತು ತರುತ್ತದೆ. ಈ ಎಚ್ಚರ ಎಲ್ಲರಲ್ಲೂ ಇರಬೇಕು. ಈ ಕಾರಣದಿಂದ ಜಾಗೃತಿ ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು’ ಎಂದರು.

ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ‘ಜಗತ್ತಿನ ಒಟ್ಟು ಅಪಘಾತಗಳಲ್ಲಿ ಭಾರತದ ಪಾಲು ಶೇಕಡ 11 ರಷ್ಟಿದೆ. ಇದರಿಂದ ದೇಶದ ಆರ್ಥಿಕತೆ ಶೇಕಡ 3ರಷ್ಟು ಕುಂಠತವಾಗಿದೆ. ರಸ್ತೆ ಸುರಕ್ಷತೆ ಎಂಬುದು ಸಮುದಾಯದ ಜವಾಬ್ದಾರಿ. ಜಾಗೃತ ಸಮಾಜದಿಂದ ರಸ್ತೆ ಸುರಕ್ಷತೆಯನ್ನು ಕಾಪಾಡಲು ಮಾತ್ರವೇ ಸಾಧ್ಯ’ ಎಂದರು.

ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ, ಬಿಜೆಪಿ ಮುಖಂಡ ಪುರುಷೋತ್ತಮ್ ಇದ್ದರು. ಮಾಸಾಚರಣೆ ಅಂಗವಾಗಿ ವ್ಯಂಗ್ಯ ಚಿತ್ರ ಪ್ರದರ್ಶನ, ವಾಕಥಾನ್, ಆಟೋ ರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡುವುದು, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT