ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ: ವೃದ್ಧ ದಂಪತಿಗೆ ಗಾಯ

Last Updated 16 ಆಗಸ್ಟ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯನಗರ ಠಾಣೆ ವ್ಯಾಪ್ತಿಯ ಹಂಪಿನಗರದಲ್ಲಿರುವ ಮನೆಯೊಂದರಲ್ಲಿ ಭಾನುವಾರ ತಡರಾತ್ರಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ವೃದ್ಧ ದಂಪತಿ ಗಾಯಗೊಂಡಿದ್ದಾರೆ.

‘ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಈ ಅವಘಡ ಸಂಭವಿಸಿದೆ.ಗಾಯಗೊಂಡಿರುವ ನಿವಾಸಿ ಸೂರ್ಯನಾರಾಯಣ ಶೆಟ್ಟಿ (74) ಹಾಗೂ ಪತ್ನಿ ಪುಷ್ಪಾ (70) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸೂರ್ಯನಾರಾಯಣ ದಂಪತಿ ಹಲವು ವರ್ಷಗಳಿಂದ ಮನೆಯಲ್ಲಿ ವಾಸವಿದ್ದರು. ಭಾನುವಾರ ತಡರಾತ್ರಿ 12.45ರ ಸುಮಾರಿಗೆ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿತ್ತು. ಕೆಲ ನಿಮಿಷಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಮನೆ ಆವರಿಸಿತ್ತು. ವೃದ್ಧ ದಂಪತಿ ಮನೆಯಿಂದ ಹೊರಗೆ ಬರಲಾರದೇ ಕೂಗಾಡುತ್ತಿದ್ದರು.’

‘ಸ್ಫೋಟದ ಸದ್ದು 2 ಕಿ.ಮೀ ಸುತ್ತಮುತ್ತ ಮನೆಗಳಿಗೂ ಕೇಳಿಸಿತ್ತು. ಆತಂಕಗೊಂಡ ಜನ, ಮನೆಯಿಂದ ಹೊರಗೆ ಬಂದಿದ್ದರು. ಸ್ಫೋಟ ಸಂಭವಿಸಿದ್ದ ಮನೆ ಬಳಿ ಬಂದಿದ್ದ ಕೆಲ ಸ್ಥಳೀಯರು, ವೃದ್ಧ ದಂಪತಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು’ ಎಂದೂ ಮೂಲಗಳು ತಿಳಿಸಿವೆ.

’ಸ್ಫೋಟದಿಂದಾಗಿ ಮನೆಯಲ್ಲಿದ್ದ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಗಳು ಸುಟ್ಟಿವೆ. ಗೋಡೆಗಳಿಗೂ ಹಾನಿಯಾಗಿದೆ’ ಎಂದೂ ಹೇಳಿವೆ.

ಅಕ್ಕ–ಪಕ್ಕದ ಮನೆಗಳಿಗೂ ಹಾನಿ:
‘ಸ್ಫೋಟದಿಂದಾಗಿ ಅಕ್ಕ–ಪಕ್ಕದ ಮನೆಗಳ ಗೋಡೆಗಳಿಗೂ ಹಾನಿಯಾಗಿದೆ. ಮನೆ ಬಳಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡರಿಸಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ಹೇಳಿಕೆ ಪಡೆಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಕಿಡಿಯಿಂದ ಬೆಂಕಿ’

‘ಸೂರ್ಯನಾರಾಯಣ ಅವರ ಮನೆಯಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ, ಫ್ರಿಡ್ಜ್, ಫ್ಯಾನ್, ಅಡುಗೆ ಅನಿಲ ಸಿಲಿಂಡರ್ ಹಾಗೂ ಗ್ಯಾಸ್ ಗೀಸರ್ ಇದೆ. ಸ್ಫೋಟಕ್ಕೆ ಯಾವ ವಸ್ತು ಕಾರಣವೆಂಬುದನ್ನು ಪರಿಶೀಲಿಸಿದಾಗ, ಅಡುಗೆ ಅನಿಲ ಸೋರಿಕೆ ಕಾರಣ ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಡುಗೆ ಮನೆಯಲ್ಲಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು. ಮನೆಯ ಹಲವು ಕೊಠಡಿಗಳಿಗೆ ಅನಿಲ ಆವರಿಸಿತ್ತು. ಫ್ರಿಡ್ಜ್‌ ಹಾಗೂ ಫ್ಯಾನ್‌ಗಳು ಆನ್‌ ಇದ್ದವು. ಸ್ವಿಚ್ ಬೋರ್ಡ್‌ನಲ್ಲಿ ಕಾಣಿಸಿಕೊಂಡ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT