ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ: ಐವರಿಗೆ ಗಾಯ

Published 30 ಮೇ 2024, 16:32 IST
Last Updated 30 ಮೇ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದು, ಮನೆಯಲ್ಲಿದ್ದ ಐವರು ಗಾಯಗೊಂಡಿದ್ದಾರೆ.

‘ಎಂ.ಎಸ್. ನಗರದ ಮನೆಯಲ್ಲಿ ಬುಧವಾರ ತಡರಾತ್ರಿ ಅವಘಡ ಸಂಭವಿಸಿದೆ. ಮದನ್ ಬಹೋರಾ (32), ಆತನ ಪತ್ನಿ ಪ್ರೇಮಾ ಜಾಲಾ (28), ಮಕ್ಕಳಾದ ಮೀರಾದಾ (12), ಒಹೋರಾ (10) ಮತ್ತು ಪ್ರಶಾಂತ್ (6) ಗಾಯಗೊಂಡಿದ್ದಾರೆ. ಎಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದರು.

‘ನೇಪಾಳದ ಮದನ್, ಕೆಲಸ ಹುಡುಕಿಕೊಂಡು ಕುಟುಂಬ ಸಮೇತ ನಗರಕ್ಕೆ ಬಂದಿದ್ದರು. ಆಹಾರ ಪೂರೈಕೆ ಕಂಪನಿಯೊಂದರ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು. ಪತ್ನಿ ಮನೆಯಲ್ಲಿರುತ್ತಿದ್ದರು. ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ಓದುತ್ತಿದ್ದರು.’

‘ಪತ್ನಿ ಪ್ರೇಮಾ ಹಾಗೂ ಮಕ್ಕಳು ಬುಧವಾರ ರಾತ್ರಿ ಊಟ ಮಾಡಿ, ಅಡುಗೆ ಮನೆ ಹಾಗೂ ಕೊಠಡಿಯ ಎಲ್ಲ ಕಿಟಕಿಗಳನ್ನು ಬಂದ್ ಮಾಡಿ ಮಲಗಿದ್ದರು. ಮದನ್ ಅವರು ಕೆಲಸ ಮುಗಿಸಿಕೊಂಡು ರಾತ್ರಿ 11 ಗಂಟೆಗೆ ಮನೆಗೆ ವಾಪಸು ಬಂದಿದ್ದರು. ಅವರು ಸಹ ಊಟ ಮಾಡಿ ಮಲಗಿದ್ದರು. ಪತ್ನಿ ಪ್ರೇಮಾ ಅವರು ತಡರಾತ್ರಿ ಎಚ್ಚರಗೊಂಡಿದ್ದರು. ಅಡುಗೆ ಅನಿಲದ ವಾಸನೆ ಬಂದಿತ್ತು’ ಎಂದು ತಿಳಿಸಿದರು.

‘ಪತಿ ಮದನ್ ಅವರನ್ನು ಎಬ್ಬಿಸಿದ್ದ ಅವರು, ಅಡುಗೆ ಮನೆಗೆ ಹೋಗಿ ಅನಿಲದ ಸಿಲಿಂಡರ್ ಪರಿಶೀಲಿಸುವಂತೆ ಹೇಳಿದ್ದರು. ಅಡುಗೆ ಮನೆಗೆ ಹೋಗಿದ್ದ ಮದನ್, ಕಿಟಕಿ ಬಾಗಿಲು ತೆರೆಯದೇ ಗ್ಯಾಸ್ ಸ್ಟೌವ್‌ ಎದುರು ಏಕಾಏಕಿ ಬೆಂಕಿ ಕಡ್ಡಿ ಗೀರಿದ್ದರು. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮದನ್ ಅವರಿಗೂ ಹೆಚ್ಚು ಬೆಂಕಿ ತಗುಲಿತ್ತು. ಅಡುಗೆ ಮನೆಗೆ ಹೊಂದಿಕೊಂಡಂತೆ ಮಲಗಿದ್ದ ಪತ್ನಿ ಹಾಗೂ ಮಕ್ಕಳಿಗೂ ಬೆಂಕಿ ತಾಗಿತ್ತು.’

‘ಗಾಯಾಳುಗಳ ಕೂಗಾಟ ಕೇಳಿದ್ದ ಸ್ಥಳೀಯರು ರಕ್ಷಣೆಗೆ ಹೋಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ನಂತರ, ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಫೋಟದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT