ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಡುಗೆ ಅನಿಲ ಸ್ಫೋಟ: ಆರು ಜನರಿಗೆ ಗಾಯ

Published 16 ಜನವರಿ 2024, 22:25 IST
Last Updated 16 ಜನವರಿ 2024, 22:25 IST
ಅಕ್ಷರ ಗಾತ್ರ

ಯಲಹಂಕ: ಅಡುಗೆ ಅನಿಲದ ಸಿಲಿಂಡರ್‌ ಸೋರಿಕೆಯಾಗಿ ಸ್ಪೋಟಗೊಂಡು ಆರು ಮಂದಿಗೆ ಗಾಯಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದ ಐದು ಮನೆಗಳಿಗೆ ಹಾನಿಯಾಗಿದೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಮಾ (58) ಫರಿಯಾ (44), ಸಲ್ಮಾ (22), ಶಾಹೀದ್ (18), ಮೀನಾಕ್ಷಿ ತಮ್ಮಯ್ಯ (34), ಅಫ್ರೋಜ್‌ (28)  ಘಟನೆಯಲ್ಲಿ ಗಾಯಗೊಂಡವರು. ಗಂಭೀರವಾಗಿ ಗಾಯಗೊಂಡಿದ್ದ ಫರಿಯಾ ಮತ್ತು ಆಸ್ಮಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಯಲಹಂಕ ಪೊಲೀಸ್ ಠಾಣೆಯ ವ್ಯಾಪ್ತಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಪಾಷಾ ಎಂಬುವರಿಗೆ ಸೇರಿದ ಏಳು ಮನೆಗಳಿವೆ. ಈ ಮನೆಗಳಲ್ಲಿ ಪಾಷಾ ಅವರ ಕುಟುಂಬದ ಒಂಬತ್ತು ಮಂದಿ ವಾಸಿಸುತ್ತಿದ್ದರು. ಈ ಮನೆಗಳ ನಡುವಿರುವ ಮನೆಯೊಂದನ್ನು ಆಸ್ಮಾ ಎಂಬುವವರಿಗೆ ಬಾಡಿಗೆ ನೀಡಲಾಗಿತ್ತು. ಇವರ ಮನೆಯಲ್ಲೇ ಬೆಳಿಗ್ಗೆ 7 ರಿಂದ 8 ಗಂಟೆಯ ನಡುವೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದರು. 

‘ಸ್ಪೋಟದ ತೀವ್ರತೆಗೆ ಅಕ್ಕಪಕ್ಕದಲ್ಲಿದ್ದ ಐದು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅನಿಲ ಸೋರಿಕೆಯಿಂದ ಈ ಘಟನೆ ಸಂಭವಿಸಿರಬಹುದು’ ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಆಗಮಿಸಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT