ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ ಅಧೀಕ್ಷಕ ಐದು ಮದ್ಯದಂಗಡಿ ಒಡೆಯ!

Published 22 ಆಗಸ್ಟ್ 2023, 23:30 IST
Last Updated 22 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಪೂರ್ವ (ಕೆ.ಆರ್‌. ಪುರ) ತಾಲ್ಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸಮೂರ್ತಿ ಐದು ಮದ್ಯದಂಗಡಿ ಒಡೆತನ ಹೊಂದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಈ ಅಧಿಕಾರಿ ವಿರುದ್ಧ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಬೆಂಗಳೂರು ಮತ್ತು ತುಮಕೂರಿನಲ್ಲಿ ಆರೋಪಿಗೆ ಸಂಬಂಧಿಸಿದ 14 ಸ್ಥಳಗಳ ಮೇಲೆ ಮಂಗಳವಾರ ಬೆಳಿಗ್ಗೆ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.

ಬೆಂಗಳೂರು ಮತ್ತು ತುಮಕೂರಿನಲ್ಲಿ ಆರೋಪಿಯ ಪತ್ನಿ, ಸಹೋದರ ಮತ್ತು ಸಹೋದರಿ ಹೆಸರಿನಲ್ಲಿ ಐದು ಮದ್ಯದಂಗಡಿಗಳನ್ನು ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇನ್ನೂ ಏಳು ಮದ್ಯದಂಗಡಿಗಳನ್ನು ಬೇನಾಮಿಯಾಗಿ ಹೊಂದಿರುವ ಕುರಿತು ಶೋಧದ ಬಳಿಕ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಿವಾಸಮೂರ್ತಿ ಬೆಂಗಳೂರಿನ ಅಂದ್ರಹಳ್ಳಿ, ಹೆಣ್ಣೂರು ಮತ್ತು ಕೊತ್ತನೂರಿನಲ್ಲಿ ತಲಾ ಎರಡು ನಿವೇಶನ ಹಾಗೂ ಎರಡು ಮನೆಗಳನ್ನು ಹೊಂದಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ಇನ್ನೂ ಕೆಲವೆಡೆ ಬೇನಾಮಿ ಆಸ್ತಿ ಹೊಂದಿರುವ ಸುಳಿವು ಲಭಿಸಿದ್ದು, ಶೋಧ ಮುಂದುವರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನೆಲಮಂಗಲ ಸಮೀಪದ ಲಕ್ಕೇನಹಳ್ಳಿಯಲ್ಲಿ ಶ್ರೀನಿವಾಸಮೂರ್ತಿ ಬೃಹತ್‌ ಬಂಗಲೆಯೊಂದನ್ನು ಇತ್ತೀಚೆಗಷ್ಟೇ ನಿರ್ಮಿಸಿದ್ದರು. ಅಲ್ಲಿಯೂ ಶೋಧ ನಡೆಸಲಾಗಿದೆ. ಸಂಜೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಬಳಿ ಒಟ್ಟು ₹4.39 ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆಮಾಡಲಾಗಿದೆ.

ತನಿಖೆಗೆ ಅಸಹಕಾರ

ದಾಳಿಯ ಸಂದರ್ಭದಲ್ಲಿ ಶ್ರೀನಿವಾಸಮೂರ್ತಿ ಮನೆಯಲ್ಲೇ ಇದ್ದರು. ಆಸ್ತಿಗಳ ಒಡೆತನ, ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಆರೋಪಿ ಹಾಗೂ ಅವರ ಕುಟುಂಬದವರು ತನಿಖೆಗೆ ಸಹಕಾರ ನೀಡಿಲ್ಲ. ತನಿಖಾ ತಂಡವು ಕಲೆಹಾಕಿರುವ ದಾಖಲೆಗಳ ಮೂಲ ಪ್ರತಿಗಳನ್ನು ಹಾಜರುಪಡಿಸದೇ ಸತಾಯಿಸಿದರು. ಯಾವ ಪ್ರಶ್ನೆಗೂ ಉತ್ತರ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಅಸಹಕಾರ ತೋರಿದ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಕೆಲಕಾಲ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ನೀಡಲಿಲ್ಲ. ಬಳಿಕ ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.

ಶಾಸಕರ ಜತೆಗೆ ಹಣಕಾಸು ನಂಟು?

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಭಾವಿಯಾಗಿದ್ದ ಒಬ್ಬರು ಸೇರಿದಂತೆ ಕೆಲವು ಶಾಸಕರ ಜತೆ ಭೂಮಾಪನ ಇಲಾಖೆ ಅಧೀಕ್ಷಕ ಶ್ರೀನಿವಾಸಮೂರ್ತಿ ಹಣಕಾಸು ವ್ಯವಹಾರದ ನಂಟು ಹೊಂದಿದ್ದರು ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭಿಸಿದೆ. ‘ಕೆಲವು ಶಾಸಕರಿಗೆ ಅಗತ್ಯ ಸಂದರ್ಭಗಳಲ್ಲಿ ಈ ಅಧಿಕಾರಿ ನಗದು ವ್ಯವಸ್ಥೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಶಾಸಕರು ಮತ್ತು ಶ್ರೀನಿವಾಸಮೂರ್ತಿ ಪರಸ್ಪರರನ್ನು ‘ಅಣ್ಣ’ ಎಂದೇ ಸಂಬೋಧಿಸಿಕೊಳ್ಳುತ್ತಿದ್ದರು ಎಂಬುದೂ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT