ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಪಿನಾಕಿನಿ ನದಿ ಹರಿವಿಗೆ ಮರುಜೀವ: ದತ್ತಾತ್ರೇಯ ಟ್ರಸ್ಟ್‌ನಿಂದ ಯತ್ನ

‘ಪುನರ್‌ ವಸುಂಧರೆ’ಯಡಿ ಸೇರಿದ ಭಗೀರಥರು
Last Updated 1 ಅಕ್ಟೋಬರ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೋಟೆ ಕೆರೆ ಉಳಿಸಲು ಬಂದಿದ್ದಾಳೆ ‘ಪುನರ್‌ ವಸುಂಧರಾ’...

ಪೂರ್ಣ ಮಲಿನಗೊಂಡ ಹೊಸಕೋಟೆ ಕೆರೆಗೆ ಪುನಶ್ಚೇತನ ಕೊಡಲು ‘ಪುನರ್‌ ವಸುಂಧರಾ’ ಹೆಸರಿನಡಿ ಬೆಂಗಳೂರಿನ ಭಗೀರಥರು ಸಜ್ಜಾಗಿದ್ದಾರೆ. ಹೊಸಕೋಟೆಯ ದತ್ತಾತ್ರೇಯ ಟ್ರಸ್ಟ್‌ ತನ್ನ ಈ ಯೋಜನೆಗೆ ‘ಪುನರ್‌ ವಸುಂಧರಾ’ ಎಂಬ ಹೆಸರಿಟ್ಟಿದೆ. ಹೊಸಕೋಟೆಯ ಸ್ಥಳೀಯರು, ಬೆಂಗಳೂರು ಸುತ್ತಮುತ್ತಲಿನ ಪರಿಸರ, ಕಾನೂನು ತಜ್ಞರು, ತಂತ್ರಜ್ಞರು, ಸಲಹೆಗಾರರ ದೊಡ್ಡ ಪಡೆಯೇ ಇದಕ್ಕಾಗಿ ಸಜ್ಜಾಗಿದೆ.

ಇದು ಕೇವಲ ಹೊಸಕೋಟೆಯ ಕೆರೆಯೊಂದನ್ನೇ ಶುದ್ಧೀಕರಿಸುವುದಲ್ಲ. ಕೆರೆಯ ಜಲಮೂಲವಾದ ನಂದಿಬೆಟ್ಟದಿಂದ ಉಗಮವಾಗಿ ಹರಿಯುವ ದಕ್ಷಿಣ ಪಿನಾಕಿನಿಗೆ ಮರು ಜೀವ ಕೊಡುವ ಕೆಲಸಕ್ಕೆ ಈ ತಂಡ ಮುಂದಾಗಿದೆ.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಅವರು ಈ ತಂಡ ತೆಗೆದುಕೊಂಡ ‘ದುಸ್ಸಾಹಸ’ದ ವಿವರ ನೀಡಿದರು.

ಹಂತ 1: ಮೊದಲು ಹೊಸಕೋಟೆ ಕೆರೆಯನ್ನು ಮಲಿನ ಮುಕ್ತಗೊಳಿ ಸುವುದು, ಪಾಚಿ, ತ್ಯಾಜ್ಯ ತೆರವು ಗೊಳಿಸುವುದು. ಹಿಂದಿನ ಪಾವಟಿಗೆ ಕಲ್ಲುಗಳನ್ನು ಮರುಜೋಡಿಸಿ ಒಂದು ರೂಪ ಕೊಡುವುದು. ಈ ಕೆರೆಗೆ ಅವಲಂಬಿತವಾಗಿರುವ ಸಮೀಪದ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸುವುದು. ಒಂದು ಕೆರೆ ತುಂಬಿದರೆ ಈ ಅವಲಂಬಿತ ಕೆರೆಗಳಲ್ಲಿ ನೀರು ತುಂಬುತ್ತದೆ.

ಹಂತ 2: ಕೆರೆ ಮೂಲತಃ ದಕ್ಷಿಣ ಪಿನಾಕಿನಿ ಹೆಸರಿನ ನದಿಯೇ ಜಲಮೂಲ. ಹೊಸಕೋಟೆ ಪಟ್ಟಣ ಕಟ್ಟಿದ ತಮ್ಮೇಗೌಡರು ಜನರ, ರೈತರ ಒಳಿತಿಗಾಗಿ ಆ ನದಿಗೆ ಕಟ್ಟೆ ಕಟ್ಟಿದರು. ಆ ನೀರು ಸಂಗ್ರಹಾಗಾರವೇ ಹೊಸಕೋಟೆ ಕೆರೆಯಾಯಿತು.ಈ ಪ್ರದೇಶದಲ್ಲಿ ಸಮೃದ್ಧ ಭತ್ತ ಬೆಳೆಯುತ್ತಿತ್ತು. ಕೆರೆಯಿಂದ ಕೋಡಿ ಬಿದ್ದ ನೀರು ಮುಂದೆ ನದಿಯ ಮೂಲಕವೇ ಹೊಸೂರು ಕಡೆಗೆ ಹರಿಯುತ್ತದೆ. ತಮಿಳುನಾಡಿನ ಕಡಲೂರಿನಲ್ಲಿ ಈ ನದಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ಈಗ ನಂದಿಬೆಟ್ಟದಿಂದ ಇಲ್ಲಿಯವರೆಗೆ ಅದರ ಹರಿವಿನ ದಾರಿ ಬಿಡಿಸುವ ಕೆಲಸ ಆಗಬೇಕು. ಎಲ್ಲ ಜಲಮೂಲ, ಒರತೆಗಳನ್ನು ಬಿಡಿಸಿ ನದಿಯ ಹರಿವಿಗೆ ಅನುವು ಮಾಡಿಕೊಡಬೇಕು. ಕರ್ನಾಟಕ ಭಾಗದಲ್ಲಿ ಸುಮಾರು 160 ಕಿಲೋಮೀಟರ್‌ ದೂರ ಈ ನದಿ ಹರಿಯುತ್ತದೆ.
ಅಷ್ಟೂ ಮಾರ್ಗವನ್ನು ತೆರವು ಮಾಡುವುದು.

ಹಂತ 3: ಈ ಕೆರೆ ಹಾಗೂ ನದಿ ಪಾತ್ರದಲ್ಲಿ ಬರುವ ಎಲ್ಲ ಕೆರೆಗಳ ಪುನರುಜ್ಜೀವನದ ಕೆಲಸ.

ಹಂತ 4: ಮತ್ತೆ ಜಲಮೂಲ ಕದಡದಂತೆ, ಜೀವಂತಿಕೆ ಕಾಪಾಡುವ ಯತ್ನ. ಕೆರೆ ದಂಡೆ, ನದಿ ಪಾತ್ರದ ಸುತ್ತ ಗಿಡ ನೆಡುವುದು, ಬೇಲಿ ನಿರ್ಮಾಣ, ಮಾಲಿನ್ಯ ತಡೆಗೆ ಕ್ರಮ.

ಸಾಧ್ಯವೇ?: ಕೇಶವಮೂರ್ತಿ ಅವರ ತಂಡ ಈಗಾಗಲೇ ಸರ್ಕಾರದವಿವಿಧ ಇಲಾಖೆಗಳ ಕದ ತಟ್ಟಿದೆ. ‘ನಮಗೆ ಅನುಮತಿ ಸಿಕ್ಕರೆ ಸಾಕು. ಕೆಲಸ ಮುಂದುವರಿಸುತ್ತೇವೆ. ಸಾರ್ವಜನಿಕರ, ಕಂಪೆನಿಗಳ ನೆರವು ಪಡೆದು ಕೆಲಸ ಮಾಡುತ್ತೇವೆ. ಅನುಮತಿ ವಿಚಾರದಲ್ಲೇ ಸಾಕಷ್ಟು ತೊಡಕುಗಳಿವೆ. ಒತ್ತುವರಿ ತೆರವಿಗೆ ಮುಂದಾದಾಗ ಬೆದರಿಕೆ, ರಾಜಕೀಯಒತ್ತಡ ಎದುರಿಸಬೇಕಾಗುತ್ತದೆ.ಇದೆಲ್ಲ ನಿವಾರಿಸಿ ಕೆಲಸ ಆರಂಭಿಸಿದರೆ 2 ವರ್ಷಗಳ ಒಳಗೆ ನಾವು ಅಂದುಕೊಂಡ ಗುರಿ ಮುಟ್ಟಬಹುದು’ ಎಂದು ಕೇಶವಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಜಲಮೂಲದ ಹಾದಿ ತೆರವು

‘ನಂದಿಬೆಟ್ಟದಿಂದ ಐದು ನದಿಗಳು ಹರಿಯುತ್ತವೆ. ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಚಿತ್ರಾವತಿ, ಅರ್ಕಾವತಿ ಮತ್ತು‍ಪಾಪಗ್ನಿ ಈ ನದಿಗಳು. ಹೊಸಕೋಟೆ ಪ್ರದೇಶದಲ್ಲಿ ಹರಿಯುವುದು ದಕ್ಷಿಣ ಪಿನಾಕಿನಿ. ಈ ನದಿ ಪುನರುಜ್ಜೀವಗೊಂಡರೆ ಹೊಸಕೋಟೆ ಸುತ್ತಮುತ್ತಲಿನ ಎಲ್ಲ ಕೆರೆಗಳು ಪುನರುಜ್ಜೀವಗೊಳ್ಳುತ್ತವೆ. ಕೃಷಿ ಭೂಮಿ, ಜೀವ ವೈವಿಧ್ಯ ಚೇತರಿಸಿಕೊಳ್ಳುತ್ತವೆ’ ಎಂದರು ಕೇಶವಮೂರ್ತಿ.

‘12 ಮೈಲಿ ಸುತ್ತಳತೆಯ ಹೊಸಕೋಟೆ ಕೆರೆ ಪ್ರದೇಶಕ್ಕೆ ಸುಮಾರು 200ಕ್ಕೂ ಹೆಚ್ಚು ಜಾತಿಯ ವಲಸೆ ಪಕ್ಷಿಗಳು ಬರುತ್ತಿದ್ದವು. ಇದು ಅವುಗಳಿಗೆ ಸಂತಾನೋತ್ಪತ್ತಿಯ ತಾಣವೂ ಆಗಿತ್ತು. ಕೆರೆ ಮಲಿನವಾದ ಮೇಲೆ ಅವೆಲ್ಲವೂ ನಿಂತಿದೆ’ ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT