ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಕ್ಕನ್‌ ಹೆರಾಲ್ಡ್‌, ಮಾಸ್ಟರ್‌ಮೈಂಡ್‌ ನೃತ್ಯ ಸ್ಪರ್ಧೆ: ಪ್ರತಿಭೆ ಅನಾವರಣ

ಅಂತರಶಾಲಾ ನೃತ್ಯ ಸ್ಪರ್ಧೆ: ಸಮಕಾಲೀನ ವಿಷಯಗಳ ಪ್ರಸ್ತುತಿ
Published 24 ನವೆಂಬರ್ 2023, 14:16 IST
Last Updated 24 ನವೆಂಬರ್ 2023, 14:16 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ಉದ್ಯಾನದ ಬಾಲಭವನದಲ್ಲಿ ಶುಕ್ರವಾರ ನಡೆದ ‘ಡೆಕ್ಕನ್‌ ಹೆರಾಲ್ಡ್‌’ ಮಾಸ್ಟರ್‌ಮೈಂಡ್‌ ಅಂತರಶಾಲಾ ನೃತ್ಯ ಸ್ಪರ್ಧೆ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಆಯಿತು.

ದಿನವಿಡೀ ನಡೆದ ಸ್ಪರ್ಧೆಯು ಕ್ಷಣದಿಂದ ಕ್ಷಣಕ್ಕೆ ವಿದ್ಯಾರ್ಥಿಗಳ ಕಾತರ ಹೆಚ್ಚಿಸುವ ಜೊತೆಗೆ ವಿಜೇತರ ಸಂಭ್ರಮಕ್ಕೂ ಕಾರಣವಾಯಿತು. ಶಾಲೆ– ನಿತ್ಯದ ಕಲಿಕೆಯ ಗುಂಗಿನಲ್ಲಿದ್ದ ವಿದ್ಯಾರ್ಥಿಗಳು, ಶುಕ್ರವಾರ ಮಾತ್ರ ನೃತ್ಯರೂಪಕ ಸಂಭ್ರಮದಲ್ಲಿ ತೇಲಾಡಿದರು.

ಬೆಳಿಗ್ಗೆ 9.30ರ ವೇಳೆಗೆ ಸ್ಪರ್ಧೆ ಆರಂಭವಾಯಿತು. ಹಲವೆಡೆಯಿಂದ ವಿದ್ಯಾರ್ಥಿಗಳ ತಂಡಗಳು ಬಂದಿದ್ದವು. 4ರಿಂದ 7ನೇ ತಗರತಿವರೆಗೆ ಕಿರಿಯರ ವಿಭಾಗ, 8ರಿಂದ 10ನೇ ತರಗತಿವರೆಗೆ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಪ್ರತಿ ವಿಭಾಗದ ಸ್ಪರ್ಧೆ ವೇಳೆಯಲ್ಲೂ ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಶಿಳ್ಳೆ ಹಾಕಿ ಸಂಭ್ರಮಿಸಿದರು.

ಸಾಂಪ್ರದಾಯಿಕ ಹಾಗೂ ಆಧುನಿಕ ನೃತ್ಯ ಶೈಲಿಯನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿಗಳು ಸಭಿಕರನ್ನು ನಿಬ್ಬೆರಗಾಗಿಸಿದರು. ವಿದ್ಯಾರ್ಥಿಗಳು ಬರೀ ನೃತ್ಯರೂಪಕ್ಕೆ ಮಾತ್ರ ಒತ್ತು ನೀಡಲಿಲ್ಲ. ನೃತ್ಯದ ಮೂಲಕವೇ ಹಲವು ಸಂದೇಶಗಳನ್ನು ಪ್ರಸ್ತುತ ಪಡಿಸಿದರು. ಸಮಕಾಲೀನ ವಿಷಯಗಳಲ್ಲಿ ಆಯ್ಕೆ ಮಾಡಿಕೊಂಡು ನೃತ್ಯ ಪ್ರಸ್ತುತ ಪಡಿಸುವ ಮೂಲಕ ತೀರ್ಪುಗಾರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದರು.

ಕಿರಿಯರು ಮತ್ತು ಹಿರಿಯರ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಳ್ಳಲು ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ವಿಜೇತ ತಂಡಗಳ ವಿದ್ಯಾರ್ಥಿಗಳು ಕೇಕೆ ಹಾಕಿ ಸಂಭ್ರಮಿಸಿದರು. ನೃತ್ಯರೂಪಕಗಳು ಹಸಿರು ಹಾಗೂ ಪರಿಸರದ ಮಹತ್ವ ಸಾರಿದವು. ವೇಷಭೂಷಣಗಳಲ್ಲಿ ಮಕ್ಕಳು ಮಿಂಚಿದರು.

ತೀರ್ಪುಗಾರರಾಗಿದ್ದ ಕಾವ್ಯ ಕಾಶೀನಾಥನ್‌ ಮಾತನಾಡಿ, ‘ಪ್ರತಿ ತಂಡವು ವಿಭಿನ್ನ ಪ್ರಯತ್ನದ ಮೂಲಕ ಸ್ಪರ್ಧೆಯ ಸವಾಲು ಹೆಚ್ಚಿಸಿದವು’ ಎಂದರು.

ಮತ್ತೊಬ್ಬ ತೀರ್ಪುಗಾರರಾಗಿದ್ದ ಮಧುಲಿತಾ ಮೊಹಾಪಾತ್ರ ಅವರು, ‘ನಮ್ಮನ್ನೂ ಬಾಲ್ಯಕ್ಕೆ ಕರೆದೊಯ್ಯುಂತೆ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳ ಕೌಶಲ ಕೂಡಾ ಅನಾವರಣವಾಗಿದೆ’ ಎಂದರು.

ನವೀನ್‌ ಕುಮಾರ್‌ ಮಾತನಾಡಿ, ‘ಒಂದೇ ವೇದಿಕೆಯಲ್ಲಿ ಹಲವು ಪ್ರತಿಭೆಗಳು ಅನಾವರಣಗೊಂಡಿವೆ. ಎಲ್ಲ ತಂಡಗಳೂ ಅದ್ಭುತ ಪ್ರದರ್ಶನ ನೀಡಿದವು’ ಎಂದರು.

ವಿವಿಧ ಸ್ಪರ್ಧೆಗಳು...:

‘ಡೆಕ್ಕನ್‌ ಹೆರಾಲ್ಡ್‌’ ಮಾಸ್ಟರ್‌ಮೈಂಡ್‌ನಿಂದ ‌ನ.29ರಂದು ರಸಪ್ರಶ್ನೆ ಸ್ಪರ್ಧೆ, 30ರಂದು ಚಿತ್ರಕಲೆ ಹಾಗೂ ಸೃಜನಶೀಲ ಬರಹ, ಡಿ.1ರಂದು ಸ್ಪೆಲ್‌ ಬೀ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತೋಷ ನೀಡಿತು. ನಾಲ್ಕು ದಿನ ಅಭ್ಯಾಸ ನಡೆಸಿದ್ದರಿಂದ ಪ್ರದರ್ಶನ ಉತ್ತಮವಾಗಿ ಮೂಡಿಬಂತು.

-ರೋಷನ್‌, 9ನೇ ತರಗತಿ ಈಸ್ಟ್‌ ವೆಸ್ಟ್‌ ಅಕಾಡೆಮಿ ರಾಜಾಜಿನಗರ

ಸ್ಪರ್ಧೆಗೆ ಬಂದಿದ್ದರಿಂದ ಬೇರೆ ಶಾಲೆಗಳ ವಿದ್ಯಾರ್ಥಿಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. ಸ್ಪರ್ಧೆಯಲ್ಲಿ ಪೈಪೋಟಿ ಹೆಚ್ಚಿತ್ತು.

-ಋತಿಕಾ. ಪೂರ್ಣಪ್ರಜ್ಞಾ ಪ್ರೌಢಶಾಲೆ ಕಮ್ಮಗೊಂಡನಹಳ್ಳಿ

ವಿಜೇತ ಶಾಲೆಗಳ ವಿವರ

ಹಿರಿಯರ ವಿಭಾಗ ಶಾಲೆ; ಪಡೆದ ಸ್ಥಾನ

ಸಿಲಿಕಾನ್‌ ಸಿಟಿ ಅಕಾಡೆಮಿ ಕೋಣನಕುಂಟೆ;ಪ್ರಥಮ

ಜ್ಯೂಬಿಲಿ ಸ್ಕೂಲ್ ಎನ್‌ಆರ್‌ಐ ಲೇಔಟ್‌;ದ್ವಿತೀಯ

ಈಸ್ಟ್‌ ವೆಸ್ಟ್‌ ಅಕಾಡೆಮಿ ರಾಜಾಜಿನಗರ;ತೃತೀಯ

ಕಾರ್ಮೆಲ್‌ ಇಂಗ್ಲಿಷ್‌ ಸ್ಕೂಲ್‌ ಪದ್ಮನಾಭ ನಗರ;ಸಮಾಧಾನಕರ

ಕಿರಿಯರ ವಿಭಾಗ ಶಾಲೆ;ಪಡೆದ ಸ್ಥಾನ

ಕಾರ್ಮೆಲ್ ಇಂಗ್ಲಿಷ್‌ ಸ್ಕೂಲ್‌ ಪದ್ಮನಾಭನಗರ;ಪ್ರಥಮ

ಜ್ಯೂಬಿಲಿ ಸ್ಕೂಲ್‌ ಎನ್‌ಆರ್‌ಐ ಲೇಔಟ್‌;ದ್ವಿತೀಯ

ಹೊಲಿಸ್ಪಿರಿಟ್‌ ಸ್ಕೂಲ್‌ ಬನ್ನೇರುಘಟ್ಟ ರಸ್ತೆ;ತೃತೀಯ

ಸಿಲಿಕಾನ್‌ ಸಿಟಿ ಅಕಾಡೆಮಿ ಕೋಣನಕುಂಟೆ;ಸಮಾಧಾನಕರ

ಆರ್ಮಿ ಪಬ್ಲಿಕ್‌ ಸ್ಕೂಲ್‌ಕಾಮರಾಜ್ ರಸ್ತೆ;ಸಮಾಧಾನಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT