ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ| ಅಪಾಯ ತಂದೊಡ್ಡುತ್ತಿರುವ ಟ್ರಾನ್ಸ್‌ಫಾರ್ಮರ್‌

ರಸ್ತೆ ಬದಿ ತೆರೆದ ಸ್ಥಿತಿಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು l ಜೋ‌ತು ಬಿದ್ದಿರುವ ವಿದ್ಯುತ್ ತಂತಿಗಳು
Last Updated 31 ಮಾರ್ಚ್ 2022, 19:50 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ರಸ್ತೆಯಲ್ಲೇ ಇರುವ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು, ಕೈಗೆಟಕುವ ಹಂತಕ್ಕೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳು, ಆಗಾಗ ಬಲಿಯಾಗುವ ದನ–ಕರುಗಳು... ಇದು ಸೋಂಪುರ ಸುತ್ತಮುತ್ತಲ ಗ್ರಾಮಗಳ ಸ್ಥಿತಿ.

ಸೋಂಪುರ ಹೋಬಳಿಯ ಗ್ರಾಮೀಣ ಭಾಗದಲ್ಲಿ ಅಳವಡಿಸಿರುವ ಬಹುತೇಕ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ರಸ್ತೆಗೆ ಹೊಂದಿಕೊಂಡಂತೆ ಇದ್ದು, ಸುತ್ತಲೂ ತಂತಿ ಬೇಲಿ ಇಲ್ಲದೆ ಅಪಾಯ ಕೇಂದ್ರಗಳಾಗಿವೆ. ಸುತ್ತಲೂ ತಂತಿಬೇಲಿ ಅಳವಡಿಸಿ ಅಪಾಯ ತಪ್ಪಿಸಬೇಕು ಎಂಬ ಕೂಗು ದೊಡ್ಡದಾಗಿದೆ.

ಈ ಹೋಬಳಿ ವ್ಯಾಪ್ತಿಯಲ್ಲಿ 80 ಕಂದಾಯ ಗ್ರಾಮಗಳು ಹಾಗೂ ಉಪಗ್ರಾಮಗಳಿವೆ. ಗ್ರಾಮದ ಮನೆಗಳಿಗೆ, ಕುಡಿಯುವ ನೀರಿನ ಕೊಳವೆ ಬಾವಿ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎರಡು ಸಾವಿರಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ.

‘ಬಹುತೇಕ ಟ್ರಾನ್ಸ್‌ಫಾರ್ಮರ್‌ಗಳು ಊರ ಮಧ್ಯ ಮತ್ತು ರಸ್ತೆ ಪಕ್ಕದಲ್ಲಿಯೇ ಅಳವಡಿಸಿರುವುದರಿಂದ ಅವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕನಿಷ್ಠ ಪಕ್ಷ ಸುತ್ತಲೂ ತಂತಿಬೇಲಿ ಅಳವಡಿಕೆಯನ್ನಾದರೂ ಮಾಡಿದರೆ ಅಪಾಯ ತಪ್ಪಿಸಬಹುದು. ಅದನ್ನೂ ಮಾಡದ ಬೆಸ್ಕಾಂ ಅಧಿಕಾರಿಗಳು ಜನ ಮತ್ತು ಜಾನುವಾರುಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂಬುದು ಸ್ಥಳೀಯರ ಆರೋಪ.

‘ಶಾಲಾ ಆವರಣ ಮತ್ತು ಮನೆಗಳಿಗೆ ಹೊಂದಿಕೊಂಡಂತೆ ಕೆಲವೆಡೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅವೈಜ್ಞಾನಿಕ ಮತ್ತು ಅಸುರಕ್ಷಿತವಾಗಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಬೆಳೆಯುವ ಹಸಿರು ಮೇವು ಮೇಯಲು ಹೋಗುವ ದನ, ಕರು, ಮೇಕೆ, ಕುರಿಗಳು ಹೋದಾಗ ವಿದ್ಯುತ್ ತಗಲಿ ಅವಘಡಗಳು ಸಂಭವಿಸುತ್ತಿವೆ. ಇನ್ನೂ ಕೆಲವೆಡೆ ಮಕ್ಕಳ ಕೈಗೆ ಎಟಕುವ ಹತ್ತಿರದಲ್ಲಿ ಟ್ರಾನ್ಸ್‌ಫಾರ್ಮರ್‌ಗಳಿವೆ. ಆಟವಾಡಲು ಹೋಗಿ ಮಕ್ಕಳು ಮುಟ್ಟಿದರೆ ಅಪಾಯ ಖಚಿತ. ಇದನ್ನು ತಡೆಯುವ ನಿಟ್ಟಿನಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಕೆಲವೆಡೆ ಇಂದಿಗೂ ಹಳೆಯ ಕಂಬಗಳೇ ಇದ್ದು, ಅಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಲಾರಿ ಅಥವಾ ದೊಡ್ಡ ವಾಹನಗಳು ಸಂಚರಿಸುವಾಗ ತಂತಿ ತಗುಲುವ ಸಾಧ್ಯತೆ ಹೆಚ್ಚಿದೆ. ಅನಾಹುತಗಳು ಸಂಭವಿಸಿದರೆ ಯಾರು ಹೊಣೆ’ ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಪ್ರಶ್ನಿಸುತ್ತಾರೆ.

‘ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಮೇಲ್ಸೇತುವೆ ಬಳಿಮಾ.23ರಂದು ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ. ಸೋಂಪುರ ಹೋಬಳಿಯಲ್ಲಿ ರಸ್ತೆ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಗಮನಿಸಿದರೆ ಆ ಘಟನೆ ಕಣ್ಮುಂದೆ ಬರುತ್ತಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT