ಶುಕ್ರವಾರ, ಜುಲೈ 1, 2022
25 °C
ದರಗಳು ಏರಿದ್ದರೂ ಖರೀದಿಗೆ ಮುಗಿಬಿದ್ದ ಜನ

ದಸರಾ: ಮಾರುಕಟ್ಟೆಗಳಲ್ಲಿ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿಗೆ ದಿನಗಣನೆ ಆರಂಭವಾಗಿರುವುದರಿಂದ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಖರೀದಿಗೆ ಜನಜಂಗುಳಿ ಶುಕ್ರವಾರ ಕಂಡು ಬಂತು.

ದಸರಾ ಆಚರಣೆಗೆ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿರುವ ಪರಿಣಾಮ ಕೆ.ಆರ್.ಮಾರುಕಟ್ಟೆ ಗ್ರಾಹಕರಿಂದ ತುಂಬಿತ್ತು. ಹಬ್ಬಕ್ಕೆ ಎಂದಿನಂತೆ ಈ ಬಾರಿಯೂ ಹೂವು, ಹಣ್ಣಿನ ದರಗಳು ಏರಿದ್ದರೂ ಜನ ಖರೀದಿಗೆ ಮುಗಿಬಿದ್ದರು. ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಕಲಾಸಿಪಾಳ್ಯ, ಗಾಂಧಿಬಜಾರ್, ಮಡಿವಾಳ, ಜಯನಗರ ಹಾಗೂ ಬಸವನಗುಡಿಯ ಕಿರು ಮಾರುಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಗಗನಕ್ಕೇರಿದ ಹೂವಿನ ದರ: ಮಾರುಕಟ್ಟೆಯತ್ತ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಎಲ್ಲ ಹೂವಿನ ದರಗಳೂ ದಿಢೀರ್ ಏರಿವೆ. ಗುಲಾಬಿ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ ಹೂಗಳು ದುಬಾರಿಯಾಗಿವೆ. ಇದರಿಂದ ಕೆ.ಆರ್.ಮಾರುಕಟ್ಟೆಯ ಹೊರ ಹಾಗೂ ಒಳಭಾಗದಲ್ಲಿರುವ ಹೂವಿನ ಮಳಿಗೆಗಳ ಎದುರು ಗ್ರಾಹಕರ ದಂಡೇ ಸೇರಿತ್ತು. ಕೊರೊನಾ ಇದ್ದರೂ ಮಾರುಕಟ್ಟೆ ಯಥಾಸ್ಥಿತಿಗೆ ಮರಳಿತ್ತು.

‘ನವರಾತ್ರಿ ಆರಂಭಗೊಳ್ಳುವ ಮುನ್ನ ಹೂವಿನ ದರಗಳು ಕೊಂಚ ಏರಿದವು. ಪ್ರಾರಂಭದಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ದಿನೇ ದಿನೇ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷದಂತೆಯೇ ಹೂವಿನ ದರಗಳು ಏರಿಕೆ ಕಂಡಿವೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಂಬೆ, ಬೂದುಗುಂಬಳ ದುಬಾರಿ: ವಿಜಯದಶಮಿ ಹಾಗೂ ಆಯುಧ ಪೂಜೆಗೆ ಬೂದುಗುಂಬಳ, ನಿಂಬೆ ಹಣ್ಣು ಹೆಚ್ಚಾಗಿ ಬಳಕೆಯಾಗುತ್ತದೆ. ನಿಂಬೆಹಣ್ಣಿನ ಬೆಲೆ ಏರಿದ್ದು, ಒಂದಕ್ಕೆ ₹5ರಂತೆ ಮಾರಾಟವಾಗುತ್ತಿದೆ. ಸಗಟು ದರದಲ್ಲಿ ಒಂದು ಮೂಟೆ ನಿಂಬೆ ದರ ₹800ರಿಂದ ₹1,200ರಂತೆ ಇದೆ.

‘ಬೂದುಗುಂಬಳಕ್ಕೆ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ ಸಗಟು ದರ ಪ್ರತಿ ಕೆ.ಜಿ.ಗೆ ₹10 ಇತ್ತು. ಈ ಬಾರಿ ಕೆ.ಜಿ.ಗೆ ₹20ರಂತೆ ಮಾರಾಟವಾಗುತ್ತಿದೆ. ಶನಿವಾರದ ವೇಳೆಗೆ ದರ ಇನ್ನಷ್ಟು ಏರಬಹುದು’ ಎಂದು ಬೂದುಗುಂಬಳ ಸಗಟು ವ್ಯಾಪಾರಿ ಮುನಿಯಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು