ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಹಸನಾಗಿಸುವ ಕಥೆಗಳು ಅಗತ್ಯ: ಟಿ. ಗೋವಿಂದರಾಜು

ಕಸಾಪ ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ಘಟಕದ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ
Published 17 ಮಾರ್ಚ್ 2024, 17:05 IST
Last Updated 17 ಮಾರ್ಚ್ 2024, 17:05 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ‘ಬದುಕನ್ನು ಹಸನು ಮಾಡುವಂತಹ ಪುರಾಣ ಕಥೆಗಳು, ತತ್ವಗಳು ನಮಗೆ ಬೇಕಾಗಿವೆ. ಸತ್ತ ಮೇಲೆ ಸ್ವರ್ಗ ತೋರಿಸುವಂತಹ ಕಥೆಗಳು ಬೇಕಿಲ್ಲ’ ಎಂದು ಜನಪದ ತಜ್ಞ ಟಿ. ಗೋವಿಂದರಾಜು ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ಘಟಕವು ಭಾನುವಾರ ಹಮ್ಮಿಕೊಂಡ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದೇವರ ದರ್ಶನಕ್ಕೆ ಮತ್ತು ಪುಣ್ಯ ಸಂಪಾದನೆಗೆ ತೀರ್ಥಯಾತ್ರೆ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ನೆರವಾಗುವ ಮೂಲಕವೂ ಪುಣ್ಯ ಸಂಪಾದನೆ ಸಾಧ್ಯ. ಇಂತಹ ಸರಳವಾದ ಸೂತ್ರಗಳನ್ನು ಜಗತ್ತಿಗೆ ಮಾರ್ಗದರ್ಶನ ಮಾಡುವ ಕಥೆಗಳು ನಮ್ಮ ಜನಪದದಲ್ಲಿವೆ’ ಎಂದರು.

‘ಜಾತಿ, ಧರ್ಮ, ಭಾಷೆ, ಗಡಿ ರಾಜಕೀಯದಂತಹ ಸಂಘರ್ಷಗಳು ಆಗಾಗ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಪಿಡುಗುಗಳಾಗಿವೆ. ಇಂತಹ ಸಂಘರ್ಷಗಳಿಗೆ ‘ಮದ್ದು’ ಕಂಡುಕೊಳ್ಳಲು ಸಮ್ಮೇಳನಗಳು ಸಹಕಾರಿಯಾಗಿವೆ. ನಿತ್ಯ ಸಂವಿಧಾನವನ್ನು ಸ್ಮರಣೆ ಮಾಡುವ ಮೂಲಕ ಅದರ ಆಶಯಗಳ ಜಾರಿಗೆ ಶ್ರಮಿಸಬೇಕು’ ಎಂದು ಹೇಳಿದರು. 

ಕಸಾಪ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ, ‘ರಾಜಧಾನಿಯಲ್ಲಿ ಕನ್ನಡ ಉಳಿದರೆ ಇಡೀ ರಾಜ್ಯದಲ್ಲಿ ಕನ್ನಡ ಉಳಿದಂತೆ. ಬೆಂಗಳೂರು ಮಹಾನಗರದ ಜೊತೆಗೆ ಮಾಯಾ ನಗರಿಯು ಹೌದು. ಇಲ್ಲಿಗೆ ದೇಶ ವಿದೇಶದಿಂದಲೂ ಜನರು ಬಂದು ನೆಲೆಸಿದ್ದಾರೆ. ಕನ್ನಡಿಗರು ಬಹುಸಂಖ್ಯಾತರಾದರೂ ಅಲ್ಪಸಂಖ್ಯಾತರಂತೆ ಇದ್ದಾರೆ. ಹಾಗಾಗಿ, ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಕನ್ನಡ ಉಳಿಸೋಣ’ ಎಂದರು.

‘ಸರ್ಕಾರ ಕೂಡ ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಒತ್ತು ನೀಡಿದರೆ ಕನ್ನಡಿಗರು ಬೀದಿಗಿಳಿದು ಹೋರಾಡುವ ಅವಶ್ಯಕತೆ ಇರುವುದರಿಲ್ಲ. ಉದ್ಯೋಗ, ನಾಮಫಲಕ, ನೆಲ, ಜಲಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಕನ್ನಡಿಗರ ಹಿತಕಾಯಬೇಕು’ ಎಂದು ಆಗ್ರಹಿಸಿದರು. 

ಸಭಾ ಕಾರ್ಯಕ್ರಮಕ್ಕೂ ಮುನ್ನ, ಸಮ್ಮೇಳನಾಧ್ಯಕ್ಷರನ್ನು ಎಂಟನೇ ಮೈಲಿಯಿಂದ ಸಾರೋಟಿನಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT