ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಡಾ.ಮಂಜುನಾಥ್‌ಗೆ ಆಹ್ವಾನ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

Last Updated 12 ಅಕ್ಟೋಬರ್ 2020, 21:20 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ದಸರಾ ಉದ್ಘಾಟಿಸಲಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕೃತವಾಗಿ ಸೋಮವಾರ ಆಮಂತ್ರಣ ನೀಡಿದರು.

ಜಯದೇವ ಆಸ್ಪತ್ರೆಯ ನಿರ್ದೇಶಕರ ಕಚೇರಿಯಲ್ಲಿ ಮಂಜುನಾಥ್ ಅವರನ್ನು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹಕಚೇರಿ ಕೃಷ್ಣದಲ್ಲಿ ಭೇಟಿಯಾದ ಸೋಮಶೇಖರ್‌, ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತ ಆಮಂತ್ರಣ ನೀಡಿದರು.

‘ದಸರಾ ಉದ್ಘಾಟನೆಗೆ ಮೊದಲ ಸಲ ಕೊರೊನಾ ಸೇನಾನಿಯಾದ ವೈದ್ಯರನ್ನು ಆಹ್ವಾನಿಸಿರುವುದು ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಸಿ.ಎನ್.ಮಂಜುನಾಥ್ ತಿಳಿಸಿದರು.

‘ಶಿಕ್ಷಣದ ಹಲವು ಘಟ್ಟಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಸಂಭ್ರಮದಿಂದ ದಸರಾ ನೋಡುತ್ತಿದ್ದೆ. ಜಂಬೂಸವಾರಿ, ಮೈಸೂರು ಅರಮನೆ, ಚಾಮುಂಡಿ ಬೆಟ್ಟದಿಂದ ನಿಂತು ದೀಪಾಲಂಕಾರ ನೋಡುವುದೇ ಒಂದು ಆನಂದ. ಎರಡು ವರ್ಷದ ಹಿಂದೆಯೂ ಸ್ನೇಹಿತರೊಡನೆ ದಸರಾ ವೀಕ್ಷಿಸಿದ್ದೆ. ಈಗ ನಾನೇ ಉದ್ಘಾಟನೆಗೆ ಆಗಮಿಸುತ್ತಿರುವುದು ಸಂತಸ ತಂದಿದೆ’ ಎಂದರು.

ಸಚಿವ ಎಸ್.ಟಿ.ಸೋಮಶೇಖರ್, ‘ಮೊದಲಿಗೆ 6 ಮಂದಿ ಕೊರೊನಾ ಸೇನಾನಿಗಳಿಂದ ದಸರಾ ಉದ್ಘಾಟಿಸುವ ತೀರ್ಮಾನವಾಗಿತ್ತು. ಆದರೆ, ಒಬ್ಬರಿಂದ ಉದ್ಘಾಟನೆ ಹಾಗೂ ಉಳಿದವರಿಗೆ ಸನ್ಮಾನ ಮಾಡಲು ನಿರ್ಧರಿಸಲಾಯಿತು. ಅದರಂತೆ ಮಂಜುನಾಥ್ ಅವರ ಹೆಸರು ಅಂತಿಮವಾಗಿದ್ದು, ಅಧಿಕೃತವಾಗಿ ಆಹ್ವಾನ ನೀಡಿದ್ದೇವೆ’ ಎಂದರು.

‘ಕೊರೊನಾ ಇರುವುದರಿಂದ ಈ ಸಲ ಸಾಂಪ್ರದಾಯಿಕ ದಸರಾಗೆ ಒತ್ತು ಕೊಡುತ್ತಿದ್ದೇವೆ. ಚಾಮುಂಡಿ ಬೆಟ್ಟದಲ್ಲಿನ ಕಾರ್ಯಕ್ರಮಕ್ಕೆ 200 ಮಂದಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿ ಹಾಗೂ ಜಂಬೂ ಸವಾರಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT