ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಜತೆ ಡೇಟಿಂಗ್‌ ಆಮಿಷ: ಟೆಕಿಗೆ ₹ 4.18 ಲಕ್ಷ ಪಂಗನಾಮ

Last Updated 27 ಜನವರಿ 2020, 2:45 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯರ ಜತೆ ಡೇಟಿಂಗ್ ಮಾಡಿಸುವುದಾಗಿ ಆಮಿಷ ಒಡ್ಡಿ ಸೈಬರ್ ವಂಚಕರು ಟೆಕಿ ಒಬ್ಬರ ₹ 4,18,900 ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ.

ಕೋಡಿಚಿಕ್ಕನಹಳ್ಳಿಯ 46 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ನೀಡಿದ ದೂರಿನ ಅನ್ವಯ ‘ಡೇಟಿಂಗ್ ಫ್ರೆಂಡ್ಸ್ ಆ್ಯಂಡ್ ಡೇಟಿಂಗ್ ಟೆಲಿಮಾರ್ಕೆಟಿಂಗ್ ಕಂಪನಿ’ ಹಾಗೂ ಶ್ರೇಯಾ ಶರ್ಮಾ ಮತ್ತು ನಿಶಾ ಗುಪ್ತ ಎಂಬುವವರ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಡೇಟಿಂಗ್ ಫ್ರೆಂಡ್ಸಿಪ್ ಆ್ಯಂಡ್ ಡೇಟಿಂಗ್‌ ಟೆಲಿ ಮಾರ್ಕೆಟಿಂಗ್’ ಹೆಸರಿನಲ್ಲಿ ಟೆಕಿಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ಕಂಪನಿಯಲ್ಲಿ ಹೆಸರು ನೋಂದಾಯಿಸಿದರೆ ಯುವತಿಯರಿಂದ ‘ವಿಶೇಷ ಸೇವೆ’ ಒದಗಿಸುತ್ತೇವೆ ಎಂದಿದ್ದ. ಯುವತಿಯರ ಮೋಹಕ್ಕೆ ಬಿದ್ದ ಟೆಕಿ, ಡಿ. 20ರಂದು ಆನ್‌ಲೈನ್ ಮೂಲಕ ₹ 2 ಸಾವಿರ ಹಣ ಜಮೆ ಮಾಡಿ ಹೆಸರು ನೋಂದಾಯಿಸಿದ್ದರು.

ಕೆಲವು ದಿನಗಳ ಬಳಿಕ ಶ್ರೇಯಾ ಶರ್ಮಾ ಎಂಬ ಯುವತಿಯ ಮೊಬೈಲ್‌ ನಂಬರ್ ಕಳುಹಿಸಿ, ಆಕೆಯನ್ನು ಸಂಪರ್ಕಿಸುವಂತೆ ಕಂಪನಿಯವರು ಸೂಚಿಸಿದ್ದರು. ಯುವತಿಗೆ ಕರೆ ಮಾಡಿದ್ದ ಟೆಕಿ, ಡೇಟಿಂಗ್ ನಡೆಸುವ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಹೋಟೆಲ್‌ನಲ್ಲಿ ಕೊಠಡಿ ಕಾದಿರಿಸಲು ₹ 2 ಲಕ್ಷ ಪಡೆದುಕೊಂಡ ಶ್ರೇಯಾ ಶರ್ಮಾ, ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ.

ಆ ಬಳಿಕ ಕಂಪನಿಯವರು ಮತ್ತೊಂದು ಮೊಬೈಲ್‌ ನಂಬರ್ ಕಳುಹಿಸಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದಾಗ ತನ್ನ ಹೆಸರು ನಿಶಾ ಗುಪ್ತ ಎಂದು ಪರಿಚಯಿಸಿಕೊಂಡಿದ್ದಾಳೆ. ಆಕೆ ಕೂಡಾ ಹೋಟೆಲ್ ಬುಕಿಂಗ್, ಟ್ಯಾಕ್ಸಿ ಖರ್ಚು, ಪಾರ್ಟಿ ಮತ್ತಿತರ ವೆಚ್ಚಗಳಿಗೆಂದು ₹ 2 ಲಕ್ಷ ಸಂದಾಯ ಮಾಡಿ ಕೊಂಡಿದ್ದಾಳೆ. ಆಕೆ ಕೂಡ ಮತ್ತೆ ಟೆಕಿ ಸಂಪರ್ಕಕ್ಕೆ ಸಿಕ್ಕಿಲ್ಲ.

‘ಇಬ್ಬರು ಯುವತಿಯರ ಮೂಲಕ ಕಂಪನಿಯವರು ಒಟ್ಟು ₹ 4,18,900 ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಇನ್ನೂ ₹ 1 ಲಕ್ಷ ಹಣ ನೀಡಬೇಕೆಂದು ಕಂಪನಿಯವರು ಕೇಳಿದ್ದಾರೆ’ ಎಂದು ದೂರಿನಲ್ಲಿ ಟೆಕಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT