ಸೋಮವಾರ, ಮಾರ್ಚ್ 27, 2023
21 °C
ಪತಿ ತೊರೆದಿದ್ದ ಆಶಾ l ದೊಣ್ಣೆಯಿಂದ ಹೊಡೆದು ಹತ್ಯೆ

ನಿತ್ಯವೂ ಕಿರುಕುಳ: ಮಗಳ ಕೊಂದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆಶಾ (32) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ತಂದೆ ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಧನಲಕ್ಷ್ಮಿ ಬಡಾವಣೆ ನಿವಾಸಿ ಆಶಾ, ತಂದೆ ರಮೇಶ್ ಹಾಗೂ ತಾಯಿ ಜೊತೆ ವಾಸವಿದ್ದರು. ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದ ಆಶಾ, ತಂದೆ– ತಾಯಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದರು. ಈ ವರ್ತನೆಯಿಂದ ಬೇಸತ್ತ ರಮೇಶ್, ಬುಧವಾರ ರಾತ್ರಿ ಮಲಗಿದ್ದ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಹಾಸಿಗೆಯಲ್ಲೇ ಆಶಾ ಮೃತಪಟ್ಟಿದ್ದರು. ಸಹಜ ಸಾವೆಂದು ಪೋಷಕರು ಸುಳ್ಳು ಹೇಳಿದ್ದರು. ತಲೆ ಬಳಿ ರಕ್ತ ಹೆಪ್ಪುಗಟ್ಟಿದ್ದನ್ನು ಗಮನಿಸಿದ್ದ ಸಂಬಂಧಿಕರು, ಕೊಲೆ ಅನುಮಾನದಡಿ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ವಿಚಾರಿಸಿದಾಗ, ತಂದೆ ರಮೇಶ್ ತಪ್ಪೊಪ್ಪಿಕೊಂಡರು’ ಎಂದು ತಿಳಿಸಿದರು.

ಎಂ.ಎಸ್ಸಿ ಪದವೀಧರೆ: ‘ಆರೋಪಿ ರಮೇಶ್, ಬಿಇಎಲ್ ನಿವೃತ್ತ ಉದ್ಯೋಗಿ. ಪತ್ನಿ ಹಾಗೂ ಮಗಳು ಆಶಾ ಜೊತೆ ನೆಲೆಸಿದ್ದರು. ಇನ್ನೊಬ್ಬ ಮಗಳು ಗೌರಿಬಿದನೂರಿನಲ್ಲಿ ವೈದ್ಯೆ ಆಗಿದ್ದಾರೆ. ಆಶಾ ಎಂ.ಎಸ್ಸಿ ಪದವೀಧರೆ’ ಎಂದು ಪೊಲೀಸರು ಹೇಳಿದರು.

‘ಕಾಲೇಜು ದಿನಗಳಿಂದಲೇ ಪೋಷಕರ ಜೊತೆ ಆಶಾ ನಿತ್ಯವೂ ಜಗಳವಾಡುತ್ತಿದ್ದರು. ಸಣ್ಣ–ಪುಟ್ಟ ವಿಚಾರಕ್ಕೂ ಪೋಷಕರಿಗೆ ಕಿರುಕುಳ ನೀಡುತ್ತಿದ್ದರು’ ಎಂದರು.

ಪತಿ ತೊರೆದಿದ್ದ ಆಶಾ: ‘ಯುವಕರೊಬ್ಬರನ್ನು ಪ್ರೀತಿಸಿದ್ದ ಆಶಾ, ಪೋಷಕರ ವಿರೋಧದ ನಡುವೆಯೂ 2020ರಲ್ಲಿ ಮದುವೆ ಆಗಿದ್ದರು. ಒಂದು ವರ್ಷ ಮಾತ್ರ ಪತಿ ಜೊತೆಗೆ ವಾಸವಿದ್ದರು. ನಂತರ, ಪತಿ ತೊರೆದು 2021ರಲ್ಲಿ ತವರು ಮನೆಗೆ ವಾಪಸು ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಆಶಾ ಮನೆಗೆ ಬರುತ್ತಿದ್ದಂತೆ ಪುನಃ ತಂದೆ–ತಾಯಿಗೆ ಕಿರುಕುಳ ನೀಡಲಾರಂಭಿಸಿದ್ದರು. ಸ್ವಾರ್ಥಿಯಾಗಿ ವರ್ತಿಸಿ, ಎಲ್ಲರನ್ನೂ ಕೀಳಾಗಿ ನೋಡುತ್ತಿದ್ದರು. ಸಣ್ಣ ವಿಚಾರಕ್ಕೂ ಬೈಯುತ್ತಿದ್ದರು. ಇದರಿಂದ ತಂದೆ–ತಾಯಿ ಸಾಕಷ್ಟು ನೊಂದಿದ್ದರು. ಬುಧವಾರ ಬೆಳಿಗ್ಗೆ ತಾಯಿ ಜೊತೆ ಜಗಳ ಮಾಡಿದ್ದ ಆಶಾ, ಹಲ್ಲೆಗೂ ಯತ್ನಿಸಿದ್ದರು. ಇದರಿಂದ ಸಿಟ್ಟಾದ ತಂದೆ, ಮಗಳನ್ನು ಕೊಂದಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.