ಶನಿವಾರ, ಜನವರಿ 18, 2020
20 °C

ರಾಷ್ಟ್ರಭಕ್ತಿ ಪ್ರೇರೇಪಿಸಿ ಪ್ರತಿಭಟನೆ ಕಿಚ್ಚು ತಣ್ಣಗಾಗಿಸಿದ ಡಿಸಿಪಿ ಚೇತನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಳೆದಿದೆ. ಅಂತಹ ಘಟನೆಗೆ ಆಸ್ಪದ ಕೊಡದಂತೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ವಿಶಿಷ್ಟ ರೀತಿಯಲ್ಲಿ ಇಲ್ಲಿನ ಪ್ರತಿಭಟನೆ ಕಾವನ್ನು ತಣ್ಣಗಾಗಿಸಿದರು.

ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ಅನುಮತಿ ಕೋರಿದ್ದವರ ಮನವಿಯನ್ನು ರದ್ದುಪಡಿಸಿದ್ದ ಪೊಲೀಸ್‌ ಇಲಾಖೆ, ನಗರದೆಲ್ಲಡೆ ಮೂರು ದಿನಗಳ ಕಾಲ ಸೆಕ್ಷನ್‌ 144 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಿತ್ತು.

ನಿಷೇಧಾಜ್ಞೆ ಲೆಕ್ಕಿಸದೆ ಕೆಲವು ಸಂಘಟನೆಗಳು ಟೌನ್‌ಹಾಲ್‌ ಬಳಿ ಸೇರಿ ಪ್ರತಿಭಟನೆ ನಡೆಸಿದರು. ಈ ವೇಳೆ ಅವರನ್ನೆಲ್ಲ ಕೂರಿಸಿಕೊಂಡು ಮಾತನಾಡಿದ ಚೇತನ್‌ ಅವರು, ‘ಹಿಂಸೆಯನ್ನು ಸೃಷ್ಟಿಸುವವರು ನಮ್ಮ–ನಿಮ್ಮ ನಡುವೆಯೇ ಇದ್ದಾರೆ. ಹಿಂಸೆ ನಮ್ಮ ಗುರಿಯಾಗಬಾರದು. ನಾನು ನಿಮ್ಮವನೇ ಎನಿಸಿದರೆ, ನನ್ಮ ಮೇಲೆ ಭರವಸೆ ಇದ್ದರೆ ನಾನು ಹೇಳುವ ಹಾಡಿಗೆ ಧ್ವನಿಗೂಡಿಸಿ’ ಎಂದು ರಾಷ್ಟ್ರಗೀತೆಯನ್ನು ಹಾಡಿ ಪ್ರತಿಭಟನಕಾರರ ಮನವೊಲಿಸಿದರು.

 

ಡಿಸಿಪಿ ಚೇತನ್‌ ಅವರು ಪ್ರತಿಭಟನಾಕಾರರೊಂದಿಗೆ ನಡೆದುಕೊಂಡ ರೀತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಬಿಗಡಾಯಿಸಿದ ಪರಿಸ್ಥಿತಿಯಲ್ಲಿ ಜನರಿಗೆ ಅರಿವು ಮೂಡಿಸಿರುವ ನಿಮ್ಮ ಪ್ರಯತ್ನ ಅತ್ಯುತ್ತಮ ಎಂದು ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಐಜಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಟ್ವೀಟ್‌ ಮಾಡಿದ್ದಾರೆ.

‘ಭಾರತೀಯರಾಗಿರುವುದೇ ನಮಗೆ ಹೆಮ್ಮೆ. ರಾಷ್ಟ್ರಭಕ್ತಿಯ ವಿಚಾರದಲ್ಲಿ ನಾವು ಪೊಲೀಸರೇನು ಭಿನ್ನರಲ್ಲ. ಕಾಯ್ದೆಗಳು ಇರುತ್ತವೆ ಮತ್ತು ಉತ್ತಮ ಸಮಾಜಕ್ಕಾಗಿ ಅವುಗಳನ್ನು ತಿದ್ದುಪಡಿ ಮಾಡಲಾಗುತ್ತದೆ. ಆದರೆ, ಭಾರತೀಯ ಎನ್ನುವುದು ಶಾಶ್ವತ ಭಾವನೆ. ಇಂತಹ ಸ್ಥಿತಿಯಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಿದ್ದಕ್ಕಾಗಿ ಧನ್ಯವಾದ ಚೇತನ್‌’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು