ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Published 7 ಜುಲೈ 2024, 15:43 IST
Last Updated 7 ಜುಲೈ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ನಿಲ್ದಾಣ ಬಳಿಯ ರಾಜಕಾಲುವೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ಡೆಲಿವರಿ ಬಾಯ್‌ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಬ್ಯಾಟರಾಯನಪುರ ನಿವಾಸಿ ಹೇಮಂತ್‌ ಕುಮಾರ್(28) ಮೃತಪಟ್ಟವರು.

‘ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್‌ಕುಮಾರ್, ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಜ್ಞಾನಭಾರತಿ ಮೆಟ್ರೊ ನಿಲ್ದಾಣದ ಬಳಿ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಆಯತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಅವರು ಬಿದ್ದಿದ್ದರು. ಸ್ಥಳದಲ್ಲಿದ್ದವರು ರಕ್ಷಣೆಗೆ ಮುಂದಾದರೂ ಸಾಧ್ಯವಾಗಿರಲಿಲ್ಲ. ಅದೇ ವೇಳೆಯಲ್ಲಿ ಜೋರು ಮಳೆ ಸುರಿಯುತ್ತಿದ್ದ ಪರಿಣಾಮ ನೀರಿನ ಹರಿವು ಹೆಚ್ಚಿದ್ದರಿಂದ ಅವರು ಕೊಚ್ಚಿ ಹೋಗಿದ್ದರು’ ಎಂದು ಪೊಲೀಸರು ಹೇಳಿದರು

‘ಮಾಹಿತಿ ತಿಳಿದು ಶುಕ್ರವಾರ ರಾತ್ರಿಯೇ ಸ್ಥಳಕ್ಕೆ ಬಂದಿದ್ದ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಶನಿವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿ, ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೈಕ್‌ ಸವಾರ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದರು.

ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈಗ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT