ಮಂಗಳವಾರ, ಮಾರ್ಚ್ 21, 2023
29 °C
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಭೆ

ಕೃಷಿ ಕಾಯ್ದೆ ವಾಪಸ್‌ಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದು ವರ್ಷವಾಗಿದ್ದರೂ ರಾಜ್ಯ ಸರ್ಕಾರವು ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಸರ್ಕಾರ ಅಂತಿಮ ತೀರ್ಮಾನ ತಿಳಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದ ನಾನಾ ಭಾಗಗಳ ರೈತರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬೆಂಗಳೂರು ಹಾಗೂ ಬೆಳಗಾವಿ ಅಧಿವೇಶನದ ವೇಳೆ ಹೋರಾಟ ನಡೆಸಿದ್ದರು. ಆಗ ಹಿಂದಕ್ಕೆ ಪಡೆಯುವ ಭರವಸೆ ನೀಡಿ ರೈತರನ್ನು ರಾಜ್ಯ ಸರ್ಕಾರವು ವಾಪಸ್‌ ಕಳುಹಿಸಿತ್ತು. ಆದರೆ, ಇದುವರೆಗೂ ತೀರ್ಮಾನ ಕೈಗೊಂಡಿಲ್ಲ. ಮುಂದಿನ ಬಜೆಟ್‌ ಅಧಿವೇಶನ
ದಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮೂರು ಕೃಷಿ ಕಾಯ್ದೆಗಳನ್ನು ಮುಂದುವರಿಸುವುದಿದ್ದರೆ ಆ ವಿಷಯವನ್ನಾದರೂ ರೈತರಿಗೆ ತಿಳಿಸಬೇಕು. ರೈತರು ಚುನಾವಣೆ ಸಂದರ್ಭದಲ್ಲಿ ತಮ್ಮದೇ ತೀರ್ಮಾನ ಕೈಗೊಳ್ಳಲಿದ್ಧಾರೆ’ ಎಂದರು.

‘ಎ.ಪಿ.ಎಂ.ಸಿ ಕಾಯ್ದೆಯಿಂದ ಕೃಷಿ ಮಾರುಕಟ್ಟೆ ಶೇ 90ರಷ್ಟು ನಿರ್ಜೀವಗೊಂಡಿದೆ. ಕಂದಾಯ ಕಾಯ್ದೆ ತಿದ್ದುಪಡಿಯಿಂದ ಪ್ರತಿದಿನ ಲಕ್ಷಾಂತರ ರೈತರು ಜಮೀನು ಕಳೆದುಕೊಂಡು ಕೃಷಿಯಿಂದ ವಿಮುಖರಾಗುತ್ತಿದ್ದಾರೆ’ ಎಂದರು.

‘ಕೇಂದ್ರ ಸಚಿವ ಅಮಿತ್‌ ಶಾ ಅವರು ಹೈನುಗಾರಿಕೆಯನ್ನು ಕಾರ್ಪೊರೇಟ್‌ ಕಂಪನಿಗೆ ವಹಿಸುವ ಕುರಿತು ಮಂಡ್ಯದ ಸಮಾವೇಶದಲ್ಲಿ
ಪ್ರಸ್ತಾಪಿಸಿದ್ದಾರೆ. ಸರ್ಕಾರವು ಧರ್ಮ ನಂಬಿಕೆಯನ್ನು ತೋರಿಸಿ ಜಾನುವಾರು ಹತ್ಯೆ ಕಾಯ್ದೆ ಜಾರಿಗೆ ತಂದಿದೆ. ಇದು ರಾಜ್ಯದ ರೈತರಿಗೆ ಅರ್ಥವಾಗಿದೆ. ನಗರದಲ್ಲಿ ಫೆಬ್ರುವರಿ ಕೊನೆಯಲ್ಲಿ ಬೃಹತ್‌ ರೈತ ಸಮಾವೇಶ ಆಯೋಜಿಸಲಾಗುವುದು. ಅಲ್ಲಿ ರೈತರ ನಡೆ ಯಾವ ಕಡೆ ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದು ಎಚ್ಚರಿಸಿದರು.

ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು