ಬುಧವಾರ, ಆಗಸ್ಟ್ 4, 2021
22 °C
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ, ಸಾಲ ಪಡೆದು ವಂಚಿಸಿದ್ದ 8 ಮಂದಿಯ ಹೆಸರು ಉಲ್ಲೇಖ

ಮಯ್ಯ ಆತ್ಮಹತ್ಯೆ: ಆತ್ಮಹತ್ಯೆಗೆ ಮುನ್ನ ಮರಣ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಣಕಾಸು ಅವ್ಯವಹಾರ ಆರೋಪದ ಸುಳಿಗೆ ಸಿಕ್ಕಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ವಾಸುದೇವ ಮಯ್ಯ ಆರು ಪುಟಗಳ ಪತ್ರ ಬರೆದಿಟ್ಟಿದ್ದು, ಅದರಲ್ಲಿ ಎಂಟು ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

‘ಬ್ಯಾಂಕಿನ ಅವ್ಯವಹಾರಕ್ಕೆ ನಾನೊಬ್ಬನೇ ಕಾರಣವಲ್ಲ. ಬೇರೆಯವರ ಪಾತ್ರವೂ ಇದೆ. ಆದರೆ, ಅಪವಾದ ಮಾತ್ರ ನನ್ನ ಮೇಲೆ ಬಂದಿದೆ. ಅನೇಕರನ್ನು ನಂಬಿ ಸಾಲ ಕೊಟ್ಟೆ. ಸಾಲ ಪಡೆದವರು ಮರುಪಾವತಿಸದೆ ವಂಚಿಸಿದರು’ ಎಂದು ಮಯ್ಯ ಪತ್ರದಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ.

‘ಬ್ಯಾಂಕಿನಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದು ಕೈ ಎತ್ತಿದ ಎಂಟು ಜನರ ಹೆಸರನ್ನು ಬರೆದಿದ್ದು, ಇವರೆಲ್ಲರಿಂದಾಗಿ ನಾನು ಅಪಮಾನ ಅನುಭವಿಸುವಂತಾಯಿತು. ಸಮಾಜಕ್ಕೆ ಮುಖ ತೋರಿಸದಂತಾಯಿತು. ಠೇವಣಿದಾರರ ನಂಬಿಕೆಯನ್ನು ಕಳೆದುಕೊಳ್ಳಬೇಕಾಯಿತು’ ಎಂದು ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

‘ಅನೇಕರು ನನ್ನಿಂದ ಪ್ರಯೋಜನ ಪಡೆದು ಮೋಸ ಮಾಡಿದರು. ನಾನು ಯಾವುದೇ ಆಸ್ತಿ ಸಂಪಾದನೆ ಮಾಡಿಲ್ಲ. ಬದಲಿಗೆ ಎಲ್ಲವನ್ನೂ ಕಳೆದುಕೊಂ ಡಿದ್ದೇನೆ. ಬ್ಯಾಂಕಿನಿಂದ ಲಾಭ ಪಡೆದವರು ಯಾರೋ; ಮಜಾ ಮಾಡಿದವರು ಮತ್ಯಾರೋ. ಈ ವ್ಯವಹಾರದಲ್ಲಿ ನಾನು ಬಲಿಪಶುವಾದೆ’ ಎಂದು ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಾಯುವ ಮೊದಲು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆನಂತರ, ಬ್ಯಾಂಕಿನ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಕಳುಹಿಸಲಿದ್ದಾರೆ.

ಈ ಮಧ್ಯೆ, ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸರು ಕುಟುಂಬ ಸದಸ್ಯರ ಹೇಳಿಕೆಯನ್ನು ಪಡೆದಿದ್ದಾರೆ.

2012ರಿಂದ 2018ರವರೆಗೆ ಮಯ್ಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾಗ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ನಕಲಿ ಖಾತೆಗಳ ಮೂಲಕ ನೀಡಿರುವ ₹ 1,400 ಕೋಟಿ ಸಾಲ ವಸೂಲಾಗದಿದ್ದರಿಂದ ಬ್ಯಾಂಕ್‌ ದಿವಾಳಿಯಾಗಿದೆ ಎಂದೂ ದೂರಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು