ಶನಿವಾರ, ಅಕ್ಟೋಬರ್ 16, 2021
22 °C

ಉದುಗೆ ಬಂಡೆಯಿಂದ ಜಾರಿ ಮರಿಯಾನೆ ಶ್ರೀರಾಮುಲು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಐದು ವರ್ಷದ ಮರಿಯಾನೆ ಶ್ರೀರಾಮುಲು ಉದ್ಯಾನ ಸಮೀಪದ ಉದುಗೆ ಬಂಡೆಯಿಂದ ಜಾರಿ ಕೆಳಗೆ ಬಿದ್ದು ಮೃತಪಟ್ಟಿದೆ.

ಇತ್ತೀಚೆಗಷ್ಟೇ ಜಿರಾಫೆ ಯದುನಂದನ ಆಹಾರ ತಿನ್ನಲು ಕುತ್ತಿಗೆಯನ್ನು ಹೊರಚಾಚಿದಾಗ ಉದ್ಯಾನದಲ್ಲಿನ ಆವರಣದ ಆಂಗಲ್‌ಗೆ ಸಿಲುಕಿ ಸಾವನ್ನಪ್ಪಿತ್ತು. ಈ ಘಟನೆ ಮರೆಯುವ ಮುನ್ನವೇ ಮರಿಯಾನೆಯ ಸಾವಿನ ಸುದ್ದಿಯು ಪ್ರಾಣಿಪ್ರಿಯರಲ್ಲಿ ಆತಂಕ ತಂದಿದೆ.

ಈ ಮರಿಯಾನೆ ಕಳೆದ ಭಾನುವಾರ ಆನೆ ಹಿಂಡಿನಿಂದ ಕಣ್ಮರೆಯಾಗಿತ್ತು. ರಾತ್ರಿವೇಳೆ ಕಾಡಿಗೆ ಹೋಗುವ ಉದ್ಯಾನದ ಆನೆಗಳ ಹಿಂಡು ಮರಳಿ ಬೆಳಿಗ್ಗೆ ಉದ್ಯಾನದತ್ತ ಬರುವುದು ಪ್ರತಿನಿತ್ಯದ ವಾಡಿಕೆ. ಭಾನುವಾರ ಹೋದ ಆನೆ ಶ್ರೀರಾಮುಲು ಸೋಮವಾರ ಕಾಣಲಿಲ್ಲ. ಕೆಲವೊಮ್ಮೆ ಆನೆಗಳು ಕಾಡಾನೆಗಳ ಜೊತೆಗೆ ಒಂದೆರೆಡು ದಿನ ಇದ್ದು ಮತ್ತೆ ಹಿಂತಿರುಗಿ ತಂಡ ಸೇರಿಕೊಳ್ಳುವ ಪರಿಪಾಠವಿದೆ.

ಶ್ರೀರಾಮುಲು ಹಿಂಡಿನಿಂದ ಕಾಣೆಯಾಗಿರುವುದು ಉದ್ಯಾನದ ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ಅವರು ಉದ್ಯಾನಕ್ಕೆ ಹೊಂದಿಕೊಂಡಿದ್ದ ಕಾಡಿನಲ್ಲಿ ಶೋಧ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಹುಡುಕಾಟದಲ್ಲಿ ತೊಡಗಿದ್ದಾಗ ಉದ್ಯಾನಕ್ಕೆ ಸಮೀಪದ ಉದುಗೆ ಬಂಡೆಯಿಂದ ಕೆಳಗೆ ಉರುಳಿ ಬಿದ್ದು ಕೊಳೆತ ಸ್ಥಿತಿಯಲ್ಲಿದ್ದ ಆನೆಯ
ಮೃತದೇಹ ಪತ್ತೆಯಾಗಿದೆ. ಎತ್ತರದಿಂದ ಬಿದ್ದ ರಭಸಕ್ಕೆ ಅದರ ದಂತ ಮುರಿದು ಹೋಗಿದೆ.

ಕಳೆದ ಒಂದು ವಾರದಿಂದಲೂ ಸತತವಾಗಿ ಮಳೆ ಬೀಳುತ್ತಿದೆ. ಇದರಿಂದ ರಾತ್ರಿ ವೇಳೆ ಹುಲ್ಲು ಮೇಯಲು ಆನೆ ಹೋಗಿದ್ದಾಗ ಬಂಡೆಯಿಂದ ಜಾರಿ ಕೆಳಗೆ ಬಿದ್ದಿರಬಹುದು ಎಂದು ಉದ್ಯಾನದ ಸಿಬ್ಬಂದಿ ಶಂಕಿಸಿದ್ದಾರೆ.

ಆನೆ ಬಿದ್ದಿರುವ ಸ್ಥಳವು ಗುಡ್ಡದಿಂದ ಸುಮಾರು 100 ಮೀಟರ್‌ಗೂ ಹೆಚ್ಚು ಆಳದಲ್ಲಿದೆ. ಉದ್ಯಾನದ ಸಿಬ್ಬಂದಿ ಇತರೇ ಆನೆಗಳ ನೆರವಿನಿಂದ  ಮೃತದೇಹವನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು ಎಂದು ಉದ್ಯಾನದ ಮೂಲಗಳು ತಿಳಿಸಿವೆ.

2016ರ ನ. 6ರಂದು ಈ ಮರಿಯಾನೆಯು ನಿಸರ್ಗಳಿಗೆ ಜನಿಸಿತ್ತು. ಆನೆಗೆ ಶ್ರೀರಾಮುಲು ಎಂದು ನಾಮಕರಣ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು