ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಸಿ ಇರದಿರೆ ಮನೆಗಳಿಗೆ ಕಾದಿದೆ ಜಲ ‘ದಂಡ’!

ಸ್ವಾಧೀನಾನುಭವ ಪತ್ರ ಸಲ್ಲಿಸದ ಮನೆಗಳ ನಿವಾಸಿಗಳಿಗೆ ಲಕ್ಷಾಂತರ ರೂಪಾಯಿ ದಂಡ
Last Updated 6 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾಧೀನಾನುಭವ ಪತ್ರ (ಒಸಿ) ಸಲ್ಲಿಸದ ಮನೆಗಳ ನಿವಾಸಿಗಳಿಗೆ ಜಲಮಂಡಳಿಯು ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿದೆ. ಒ.ಸಿ ಸಲ್ಲಿಸದೆ ಬಿಲ್ಡರ್‌ಗಳು ನಿರ್ಲಕ್ಷ್ಯ ಮಾಡಿದ್ದರೆ, ಈ ದಂಡ ವಿಧಿಸುವಲ್ಲಿ ಜಲಮಂಡಳಿಯ ಅಧಿಕಾರಿಗಳೂ ತಾರತಮ್ಯ ಮಾಡುತ್ತಿರುವುದು ಸಮಸ್ಯೆ ಯಾಗಿದೆ ಎಂದು ಖರೀದಿದಾರರು ದೂರುತ್ತಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಮಂಜೂರು ಮಾಡಲು ಸ್ವಾಧೀನಾ
ನುಭವ ಪತ್ರದ (ಒಸಿ) ಅವಶ್ಯಕತೆ ಇದೆ. ಆದರೆ, ಸ್ವಾಧೀನಾನುಭವ ತಿದ್ದುಪಡಿ ಕಾಯ್ದೆಯ 5.4 ನಿಯಮದ ಅನ್ವಯ, 2016ರ ಫೆ.25ಕ್ಕಿಂತ ಮೊದಲು ನಿರ್ಮಿಸಿರುವ ಕಟ್ಟಡಗಳಿಗೆ ಒ.ಸಿ ಅವಶ್ಯಕತೆ ಇಲ್ಲ ಎಂದಿದೆ. 2017ರ ಡಿಸೆಂಬರ್ 12ರಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೂ, ಜಲಮಂಡಳಿಯ ಅಧಿಕಾರಿ
ಗಳು ದಂಡ ವಿಧಿಸುತ್ತಿದ್ದಾರೆ’ ಎಂದು ಮಲ್ಲತ್ತಹಳ್ಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿ ಉದಯ್‌ ಶೆಟ್ಟಿ ದೂರಿದರು.

‘ಅಪಾರ್ಟ್‌ಮೆಂಟ್‌ನ ಎಲ್ಲ ಮನೆಗಳಿಗೆ ಸೇರಿ 76 ಲಕ್ಷ ಶುಲ್ಕ ಬಂದಿದೆ. ಒಂದೊಂದು ಮನೆಯವರು ₹25 ಸಾವಿರ ಶುಲ್ಕ ಕಟ್ಟಬೇಕಾಗಿದೆ. ಐದು ವರ್ಷಗಳ ಹಿಂದೆ ಬಿಲ್ಡರ್‌ ಈ ಅಪಾರ್ಟ್‌ಮೆಂಟ್ ಕಟ್ಟಿದ್ದಾರೆ. ಮೂರು ವರ್ಷಗಳಿಂದ ನಾವು ವಾಸವಾಗಿದ್ದೇವೆ. ಅಲ್ಲಿಂದ ತಿಂಗಳಿಗೆ ₹20 ಸಾವಿರ, ₹25 ಸಾವಿರ ಸೇರಿ 7 ಲಕ್ಷ ಆಗಿದೆ. ಈ ನಿಯಮದ ಬಗ್ಗೆ ಗಮನ ಸೆಳೆದಾಗ ಕೆಲವು ಅಧಿಕಾರಿಗಳು ದಂಡ ವಿಧಿಸಿರಲಿಲ್ಲ. ಆದರೆ, ಕೆಲವು ಅಧಿಕಾರಿಗಳು ದಂಡ ವಿಧಿಸುತ್ತಾರೆ’ ಎಂದು ಅವರು ದೂರಿದರು.

‘ಸೇಲ್‌ ಡೀಡ್‌ ಅಥವಾ ಮಾರಾಟ ಒಪ್ಪಂದದ ಆಧಾರದ ಮೇಲೆಯೇ ಮನೆಯನ್ನು ಖರೀದಿಸಿರುತ್ತೇವೆ. ಕೆಲವು ಸಂದರ್ಭದಲ್ಲಿ ನಿರ್ಮಾಣ ಹಂತ ದಲ್ಲಿರುವಾಗಲೇ ಖರೀದಿ ಮಾಡಲಾಗಿರುತ್ತದೆ. ಕಟ್ಟಡ ಸಂಪೂರ್ಣಗೊಂಡ ನಂತರವೇ ಸ್ವಾಧೀನಾನುಭವ ಪತ್ರ ಕೊಡುತ್ತಾರೆ. ಅಲ್ಲದೆ, ಈ ಪತ್ರ ಒದಗಿಸಲು 30 ದಿನಗಳವರೆಗೆ ಕಾಲಾವಕಾಶವೂ ಇರುತ್ತದೆ. ಈ ಸಂದರ್ಭದಲ್ಲಿ ಬಿಲ್ಡರ್‌ಗಳು ಮನೆ ಮಾರಾಟ ಮಾಡಿ, ಮುಂದೆ ನೋಡಿದರಾಯಿತು ಎಂದುಕೊಳ್ಳು ತ್ತಾರೆ. ಇದರಿಂದಲೂ ಖರೀದಿದಾರರಿಗೆ ಸಮಸ್ಯೆಯಾಗುತ್ತಿದೆ. ನಗರದಲ್ಲಿ ಸಾವಿರಾರು ಜನ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘2016ಕ್ಕಿಂತ ಮೊದಲಿನ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದರೂ ದಂಡ ಹಾಕಲಾಗುತ್ತಿದೆ. ನಮ್ಮದು ಹೊಸ ಸಂಪರ್ಕ ಎಂದು ಪರಿಗಣಿಸಬೇಕು. ದಂಡದ ಬದಲು ಹೊಸ ಸಂಪರ್ಕ ಪಡೆಯಲು ನೀಡಬೇಕಾದ ಶುಲ್ಕ ಬೇಕಾದರೂ ಪಾವತಿಸುತ್ತೇವೆ’ ಎಂದರು.

‘ಕಟ್ಟಡ ನಿರ್ಮಾಣದಲ್ಲಿ ಎಷ್ಟು ಪ್ರಮಾಣದ ಉಲ್ಲಂಘನೆ ಇರುತ್ತದೆಯೋ, ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಬೇಕು. ಆದರೆ, ದಂಡ ನಿಗದಿ ವೇಳೆಯೂ ಯಾವುದೇ
ನಿಯಮ ಪಾಲನೆಯಾಗುತ್ತಿಲ್ಲ. ಅಲ್ಲದೆ, ಕೆಲವರಿಗೆ ದಂಡ ವಿಧಿಸುತ್ತಾರೆ. ಕೆಲವರಿಗೆ ಇಲ್ಲ. ಇಂತಹ ತಾರತಮ್ಯ ನಿಲ್ಲಬೇಕು’ ಎಂದು ಅವರು ಒತ್ತಾಯಿಸಿದರು.

‘ನಿಯಮದ ಪ್ರಕಾರವೇ ದಂಡ’

‘2016ರ ಫೆ.25ರೊಳಗೆ ಕಟ್ಟಡ ನಿರ್ಮಾಣವಾಗಿದ್ದರೂ, ಜಲಮಂಡಳಿ ಸಂಪರ್ಕವನ್ನು ಅದರ ನಂತರ ಪಡೆದಿರುತ್ತಾರೆ. ಈ ಅವಧಿಯಲ್ಲಿ ಸ್ವಾಧೀನಾನುಭವ ಪತ್ರ ನೀಡದೇ ಇದ್ದರೆ ನಿಯಮದಂತೆಯೇ ದಂಡ ವಿಧಿಸಲಾಗುತ್ತದೆ. ಇದು ಬಿಲ್ಡರ್‌ಗಳು ಮತ್ತು ಖರೀದಿದಾರರ ನಡುವಿನ ಸಮಸ್ಯೆ. ಜಲಮಂಡಳಿಯ ಪಾತ್ರ ಇದರಲ್ಲಿ ಏನೂ ಇಲ್ಲ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಲ್ಡರ್‌ಗಳ ತಪ್ಪಿನಿಂದ ಖರೀದಿದಾರರಿಗೆ ತೊಂದರೆಯಾಗುವಂತಿದ್ದರೆ ನಿಯಮದಲ್ಲಿಯೇ ಬದಲಾವಣೆ ತರಬೇಕು. ಬಿಬಿಎಂಪಿಯು ಈ ತಿದ್ದುಪಡಿ ತರಬೇಕು’ ಎಂದು ಅವರು ಹೇಳಿದರು.

‘ಮನೆ ಖರೀದಿಸುವಾಗ ಗ್ರಾಹಕರು ಇದನ್ನೆಲ್ಲ ಗಮನಿಸಬೇಕು. ಕಟ್ಟಡ ನಿರ್ಮಾಣದ ಎಲ್ಲ ನಿಯಮಗಳನ್ನು ಬಿಲ್ಡರ್‌ಗಳು ಪಾಲಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ನಂತರವೇ ಮನೆ ಖರೀದಿಸಬೇಕು’ ಎಂದೂ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT