ಶನಿವಾರ, ನವೆಂಬರ್ 23, 2019
17 °C

ದೀಪಾವಳಿಗೆ 1,600 ವಿಶೇಷ ಕೆಎಸ್‌ಆರ್‌ಟಿಸಿ ಬಸ್

Published:
Updated:
Prajavani

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೆಚ್ಚುವರಿಯಾಗಿ 1,600 ವಿಶೇಷ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ಇದೇ 25, 26 ಮತ್ತು 27ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳು ಹೊರಡಲಿವೆ. 29ರಂದು ಬೆಂಗಳೂರಿಗೆ ವಾಪಸ್ ಬರಲಿವೆ.

ಮೆಜೆಸ್ಟಿಕ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ಬಸ್‌ಗಳು ಸಂಚಾರ ಮಾಡಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ತೆರಳ
ಲಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚರಿಸಲಿವೆ.

ವಿಜಯನಗರ, ಜೆ.ಪಿ.ನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರ 18ನೇ ಅಡ್ಡ ರಸ್ತೆ, ಕೆಂಗೇರಿ ಉಪನಗರದಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಸಂಚರಿಸಲಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ಕಾಯ್ದಿರಿಸಿದಲ್ಲಿ ಶೇ 5 ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ 10 ರಿಯಾಯಿತಿ ಕೊಡಲಾಗುವುದು.

ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದಲೂ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)