ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಾವಳಿ: ಮಾಲಿನ್ಯ ಮಟ್ಟದಲ್ಲಿ ಅಲ್ಪ ಹೆಚ್ಚಳ

Published : 30 ಅಕ್ಟೋಬರ್ 2019, 4:48 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಆಗುತ್ತಿದ್ದ ವಾಯುಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿಯ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ವಾಯುಮಾಲಿನ್ಯದಲ್ಲಿ ಅಲ್ಪ ಏರಿಕೆಯಾಗಿದೆ.

ವಸತಿ ಪ್ರದೇಶಗಳಲ್ಲಿ ಸಾಮಾನ್ಯ ದಿನಗಳಿಗಿಂತ ವಾಯುಮಾಲಿನ್ಯ ಹೆಚ್ಚಾಗಿದೆ. ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸಾಮಾನ್ಯ ದಿನಗಳಷ್ಟೇ ಇದೆ. ಮಳೆ ಇರುವ ಕಾರಣ, ಜನರಿಗೆ ಹೆಚ್ಚು ಪಟಾಕಿ ಸಿಡಿಸಲು ಸಾಧ್ಯವಾಗದಿರುವುದೂ ಇದಕ್ಕೆ ಕಾರಣ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ.

ನಗರದ ಏಳು ಕಡೆ ನಿರ್ಮಿಸಲಾಗಿರುವ ವಾಯು ಗುಣಮಟ್ಟ ಮಾಪನ ಕೇಂದ್ರಗಳು ಮಾಲಿನ್ಯ ಕುರಿತ ದತ್ತಾಂಶಗಳನ್ನು ಸಂಗ್ರಹಿಸಿವೆ. ಹಬ್ಬದ ದಿನಗಳಿಗೆ ಹೋಲಿಸಿದರೆ, ನಗರದ ಬಹುತೇಕ ಪ್ರದೇಶಗಳಲ್ಲಿನ ಗಾಳಿ ಗುಣಮಟ್ಟ ಸೂಚ್ಯಂಕ ಈ ಬಾರಿ ‘ತೃಪ್ತಿದಾಯಕ’ವಾಗಿದೆ. ನಗರದ ರೈಲು ನಿಲ್ದಾಣದಲ್ಲಿ ಎಕ್ಯೂಐ 110ರಿಂದ 108 ಕ್ಕೆ ಇಳಿದಿತ್ತು. ವಾಹನಗಳ ಸಂಚಾರ ಕಡಿಮೆ ಇದ್ದುದೂ ಇದಕ್ಕೆ ಕಾರಣವಾಗಿದೆ. ಆದರೆ, ಹೆಬ್ಬಾಳದ ಪಶು ಆಸ್ಪತ್ರೆ ಸುತ್ತ–ಮುತ್ತಲಿನ ಪ್ರದೇಶದಲ್ಲಿ ಎಕ್ಯೂಐ ದುಪ್ಪಟ್ಟಾಗಿದೆ.

‘ಹೆಬ್ಬಾಳ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗಿದೆ. ಇದರಿಂದ ವಾಯುಮಾಲಿನ್ಯ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ಬಸವೇಶ್ವರನಗರದಲ್ಲಿಯೂ ಈ ಪ್ರಮಾಣ ಹೆಚ್ಚಾಗಿದೆ. ಮಳೆಯ ನಡುವೆಯೂ ಈ ಭಾಗದಲ್ಲಿ ಹೆಚ್ಚು ಜನ ಪಟಾಕಿ ಹಚ್ಚಿದ್ದಾರೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಣ್ಣು ಕತ್ತಲೆಯಾಗಿಸಿದ ಪಟಾಕಿ

ಬೆಂಗಳೂರು: ಪಟಾಕಿಯಿಂದಾಗುವ ಅವಘಡಗಳು ಮಂಗಳವಾರವೂ ಮುಂದುವರಿದಿವೆ.

36 ವರ್ಷದ ವಿಕ್ರಂ ಹೂಕುಂಡ ಹಚ್ಚುವ ವೇಳೆ ಸಂಭವಿಸಿದ ಅನಿರೀಕ್ಷಿತ ಸ್ಫೋಟದಿಂದ ಎಡಗಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ.

ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 16 ಪ್ರಕರಣಗಳು ದಾಖಲಾಗಿವೆ. ಸಣ್ಣ–ಪುಟ್ಟ ಗಾಯಗಳಾಗಿದ್ದು, ಈಪೈಕಿ ಎಂಟು ಮಕ್ಕಳು ದಾಖಲಾಗಿದ್ದಾರೆ.

ಚಿಕ್ಕಗೊಲ್ಲರಟ್ಟಿ ನಿವಾಸಿ 22 ವರ್ಷದ ಪವನ್‌ ಎಂಬುವರು ಕೂಡ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ದೃಷ್ಟಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

‘ಆಟಂ ಬಾಂಬ್‌ ಹಚ್ಚಿಟ್ಟು, ಅದರ ಮೇಲೆ ಬಣ್ಣದ ತಗಡಿನ ಡಬ್ಬ ಇಟ್ಟಿದ್ದರು. ಸ್ಫೋಟದ ತೀವ್ರತೆಗೆ ಡಬ್ಬ ಸಿಡಿದು ಮುಖಕ್ಕೆ ಜೋರಾಗಿ ಅಪ್ಪಳಿಸಿದೆ. ಈ ಪೈಕಿ ಕಣ್ಣಿಗೆ ತೀವ್ರ ಹೊಡೆತ ಬಿದ್ದಿದೆ. ಕಣ್ಣಿನ ಗುಡ್ಡೆಗಳು ಹೊರ ಬಂದಿವೆ’ ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ. ಸುಜಾತಾ ರಾಥೋಡ್‌ ತಿಳಿಸಿದರು.

ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ 20 ಪ್ರಕರಣಗಳು ದಾಖಲಾಗಿವೆ.

‘ಯಾವುದೇ ಪ್ರಕರಣ ತೀವ್ರ ಸ್ವರೂಪದ್ದಾಗಿಲ್ಲ. ಹೊರರೋಗಿಗಳ ವಿಭಾಗದಲ್ಲಿಯೇ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಅಗತ್ಯವಿದ್ದರೆ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ’ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕರಾದ ಡಾ. ಉಮಾ ತಿಳಿಸಿದರು.

ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ)

ಪ್ರದೇಶ;ಸಾಮಾನ್ಯ ದಿನ;ಅ.27;ಅ.28

ನಗರ ರೈಲು ನಿಲ್ದಾಣ;110;114;108

ಬಸವೇಶ್ವರನಗರ;51;91;73

ಪಶು ಆಸ್ಪತ್ರೆ;46;69;86

ಜಯನಗರ 5ನೇ ಹಂತ;75;97;89

ವಿದ್ಯುತ್‌ ಕಾರ್ಖಾನೆ;73;68;88

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌;90;98;60

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT