ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಪ್ರಚೋದನೆ ನೀಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

Published 20 ಮಾರ್ಚ್ 2024, 16:32 IST
Last Updated 20 ಮಾರ್ಚ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ಕೋಮುದ್ವೇಷ ಹೆಚ್ಚಿಸಿ, ಗಲಭೆ ಎಬ್ಬಿಸಲು ನಗರ್ತಪೇಟೆಯಲ್ಲಿ ದ್ವೇಷ ಭಾಷಣ ಮಾಡಿರುವ ಸಂಸದರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ಆಗ್ರಹಿಸಿದೆ.

ಸಂಘಟನೆಯ ಎಸ್.ಜಿ. ಸಿದ್ದರಾಮಯ್ಯ, ಮಾವಳ್ಳಿ ಶಂಕರ್, ದಿನೇಶ್ ಅಮಿನ್‌ ಮಟ್ಟು, ವಿಮಲಾ ಕೆ.ಎಸ್., ಬಿ. ಶ್ರೀಪಾದ‌ ಭಟ್, ಜಾಣಗೆರೆ ವೆಂಕಟರಾಮಯ್ಯ, ಕಾ.ತ. ಚಿಕ್ಕಣ್ಣ, ಬಂಜಗೆರೆ ಜಯಪ್ರಕಾಶ್, ಟಿ. ಸುರೇಂದ್ರ ರಾವ್, ರವಿಕುಮಾರ್ ಬಾಗಿ, ಎಚ್. ದಂಡಪ್ಪ ಅವರು ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಗರ್ತಪೇಟೆಯ ಅಂಗಡಿಯೊಂದರಲ್ಲಿ ಜಗಳ ನಡೆದಿದ್ದು, ಅಂಗಡಿ ಮಾಲೀಕರು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ನೀಡಿದ ದೂರಲ್ಲಿ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತ ಅಂಶಗಳಿಲ್ಲ. ಅಂಥ ಯಾವುದೇ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿರುವುದು ಕೂಡ ವರದಿಯಾಗಿದೆ.

ಈ ಘಟನೆಗೆ ಕೋಮು ಬಣ್ಣ ಬಳಿಯಲು ತೇಜಸ್ವಿ ಸೂರ್ಯ ಪ್ರಯತ್ನ ನಡೆಸಿದ್ದಾರೆ. ‘ಎಕ್ಸ್‌’ ಪೋಸ್ಟ್‌ನಲ್ಲಿರುವ ಅವರ ಹೇಳಿಕೆಯಲ್ಲಿ ಇದು ಸ್ಪಷ್ಟವಾಗುತ್ತಿದೆ. ನಗರ್ತಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜಾಜಿನಗರದ ಶಾಸಕ ಸುರೇಶ್‌ ಕುಮಾರ್‌, ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ದ್ವೇಷ ಭಾಷಣ ಮಾಡಿದ್ದರು. ಧರ್ಮ, ಜಾತಿಗಳ ಹೆಸರಿನಲ್ಲಿ ದ್ವೇಷ, ಹಿಂಸೆ, ಗಲಭೆ ಪ್ರಚೋದಿಸುವ ಶಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸುರೇಶ್‌ ಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT