ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಪಿಸಿಬಿ ವಿರುದ್ಧ ಸಿಬಿಐ ತನಿಖೆಗೆ ಪಿ.ಆರ್‌. ರಮೇಶ್‌ ಆಗ್ರಹ

Last Updated 21 ಮಾರ್ಚ್ 2023, 22:43 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 200ರಿಂದ 2015ರವರೆಗೆ ಕಾನೂನುಬಾಹಿರವಾಗಿ 1,316 ಪರವಾನಗಿಗಳನ್ನು ನೀಡಿದ್ದು, ಈ ಹಗರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶರತ್‌ಚಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ, 1,316 ಪ್ರಕರಣಗಳಲ್ಲಿ ನಿರ್ಮಾಣ ಮತ್ತು ಕಾರ್ಯಾ ಚರಣೆಗೆ ಅನುಮತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಈ ಎಲ್ಲ ಪ್ರಕರಣಗಳಲ್ಲಿ ನೀಡಿದ್ದ ಅನುಮತಿ ಯನ್ನು ಹಿಂಪಡೆಯುವುದಾಗಿ ಮಂಡಳಿಯು ಹೈಕೋರ್ಟ್‌ಗೆ ತಿಳಿಸಿತ್ತು. ಈವರೆಗೂ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ’ ಎಂದರು.

ಜಲ ಕಾಯ್ದೆ–1974ರ ಸೆಕ್ಷನ್‌ 44ಕ್ಕೆ ವಿರುದ್ಧ ವಾಗಿ ಮಂಡಳಿಯಲ್ಲಿ ನಿರ್ಣಯ ಕೈಗೊಂಡು, ಅದರ ಆಧಾರದಲ್ಲಿ ಅನುಮತಿಗಳನ್ನು ನೀಡಲಾ ಗಿತ್ತು. ಈ ರೀತಿ ಅಕ್ರಮ ಎಸಗಿರುವುದರ ಹಿಂದೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿತ್ತು. ಆ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಅಕ್ರಮವಾಗಿ ನೀಡಿರುವ ಅನುಮತಿಗಳನ್ನು ರದ್ದುಪಡಿಸುವ ಕೆಲಸವೂ ಆಗಿಲ್ಲ. ಆಗ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರಾಗಿದ್ದವರ ಜತೆಗೆ ಸಮ್ಮಿಶ್ರ ಸರ್ಕಾರದಲ್ಲಿದ್ದವರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದರು. ಕಾಯ್ದೆಗೆ ವಿರುದ್ಧವಾಗಿ 2007ರ ನವೆಂಬರ್‌ 13ರಂದು ಮಾಡಿದ್ದ ಠರಾವನ್ನು ಮಂಡಳಿ ಸ್ವಇಚ್ಛೆಯಿಂದ ಹಿಂಪಡೆದಿತ್ತು. ಈ ಸಂಬಂಧ ಹೈಕೋರ್ಟ್‌ 2022ರ ಜುಲೈ 7ರಂದು ತೀರ್ಪನ್ನೂ ನೀಡಿದೆ. ಆದರೆ, ಈಗ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಕಾಲಹರಣ ಮಾಡುವ ಕೆಲಸವನ್ನು ಮಂಡಳಿ ಮಾಡುತ್ತಿದೆ. ಹೈಕೋರ್ಟ್‌ ತೀರ್ಪು ಪಾಲಿಸದ ಮಂಡಳಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ರಮೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT