ಸೋಮವಾರ, ಆಗಸ್ಟ್ 15, 2022
24 °C
ಹುದ್ದೆಗಳ ಉನ್ನತೀಕರಣದ ಪ್ರಸ್ತಾವಕ್ಕೆ ಎಂಜಿನಿಯರ್‌ಗಳ ವಿರೋಧ

ಸಿ.ಇ ಹುದ್ದೆ ನೀಡದಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳಲ್ಲಿ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ಹೊಂದಿದವರಿಗಾಗಿ ಮುಖ್ಯ ಎಂಜಿನಿಯರ್‌ ಹುದ್ದೆಗಳನ್ನು ಉನ್ನತೀಕರಿಸುವುದನ್ನು ದೀರ್ಘ ಕಾಲದಿಂದ ಈ ಹುದ್ದೆಯ ನಿರೀಕ್ಷೆಯಲ್ಲಿರುವ ಮುಖ್ಯ ಎಂಜಿನಿಯರ್‌ಗಳು ವಿರೋಧಿಸಿದ್ದಾರೆ.

ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ಪಡೆದ ಹಲವರು ಮುಖ್ಯ ಎಂಜಿ
ನಿಯರ್‌ ಹುದ್ದೆಗಳಲ್ಲೇ ಮುಂದುವರಿಯುತ್ತಿದ್ದಾರೆ. ಇದಕ್ಕಾಗಿ ಆ ಹುದ್ದೆಗಳನ್ನು ಪ್ರಧಾನ ಎಂಜಿನಿಯರ್‌ ಹುದ್ದೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಈಗ ಎರಡೂ ಇಲಾಖೆಗಳಲ್ಲಿ 11 ಮುಖ್ಯ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಉನ್ನತೀಕರಣ ಮಾಡಬಾರದು ಎಂದು ಹುದ್ದೆ ನಿರೀಕ್ಷೆಯಲ್ಲಿರುವ ಮುಖ್ಯಎಂಜಿನಿಯರ್‌ಗಳಾದ ಬಿ.ಕೆ. ಪವಿತ್ರ, ಎಚ್‌.ಸುರೇಶ್‌, ಬಿ.ಕೆ. ರಾಜೇಂದ್ರ ಮತ್ತು ಎನ್‌.ಜಿ. ಗೌಡಯ್ಯ ಸೆ. 9ರಂದು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಕಾವೇರಿ ನೀರಾವರಿ ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮಗಳ ತಾಂತ್ರಿಕ ನಿರ್ದೇಶಕರು, ತುಮಕೂರಿನ ಹೇಮಾವತಿ ನಾಲಾ ವಲಯ, ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಪಾಲನೆ ಮತ್ತು ಪೋಷಣೆ ವಲಯ, ರಾಂಪುರದ ಐಬಿಸಿ ವಲಯ, ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಗಳು ಮತ್ತು ಲೋಕೋಪಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿಗಳ (ಮುಖ್ಯ ಎಂಜಿನಿಯರ್‌ ಶ್ರೇಣಿ) ಹುದ್ದೆಗಳು ಖಾಲಿ ಇವೆ.

‘ಕೆಲವು ಮುಖ್ಯ ಎಂಜಿನಿಯರ್‌ಗಳಿಗೆ ಆರು ತಿಂಗಳಿನಿಂದ ಹುದ್ದೆ ನೀಡಿಲ್ಲ. ಇನ್ನು ಕೆಲವರಿಗೆ ಮೂರು ತಿಂಗಳಿನಿಂದ ಹುದ್ದೆ ನೀಡಿಲ್ಲ. ಈಗ ಖಾಲಿ ಇರುವ ಮುಖ್ಯ ಎಂಜಿನಿಯರ್‌ ಹುದ್ದೆಗಳನ್ನು ಉನ್ನತೀಕರಿಸಿದರೆ ನಮಗೆ ಹುದ್ದೆ ನೀಡಲು ಸಾಧ್ಯವೇ ಆಗುವುದಿಲ್ಲ. ಆದ್ದರಿಂದ ಪ್ರಧಾನ ಎಂಜಿನಿಯರ್‌ ಹುದ್ದೆಗಳಿಗೆ ಬಡ್ತಿ ಪಡೆದವರಿಗಾಗಿ ಈ ಹುದ್ದೆಗಳನ್ನು ಉನ್ನತೀಕರಿಸಬಾರದು. ಹುದ್ದೆ ನಿರೀಕ್ಷೆಯಲ್ಲಿರುವ ಮುಖ್ಯ ಎಂಜಿನಿಯರ್‌ಗಳಿಗೆ ನೀಡಬೇಕು’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಈ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ಎಚ್‌.ಎಲ್‌. ಪ್ರಸನ್ನ ಮತ್ತು ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಯೋಜನೆ ಮುಖ್ಯ ಎಂಜಿನಿಯರ್‌ ಎಂ.ಗಣೇಶ ಅವರು ಪ್ರಧಾನ ಎಂಜಿನಿಯರ್‌
ಗಳಾಗಿ ಬಡ್ತಿ ಹೊಂದಿದ್ದಾರೆ. ಅದೇ ಹುದ್ದೆಗಳನ್ನು ಉನ್ನತೀಕರಿಸಿ, ಅವರನ್ನು ಅಲ್ಲಿಯೇ ಮುಂದುವರಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಪರಿಶೀಲಿಸಿ ಕ್ರಮ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ, ‘ಮುಖ್ಯ ಎಂಜಿನಿಯರ್‌ಗಳು ಮನವಿ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು