ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಹಿಂಸೆ ವಿರೋಧಿ ಕಾನೂನು ಜಾರಿಗೆ ಒತ್ತಾಯ

ಲಾಕಪ್‌ ಸಾವು ತಡೆಗೆ ಕಾನೂನು ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳ ಸಲಹೆ
Last Updated 7 ಜುಲೈ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ತಮಿಳುನಾಡಿನ ತೂತ್ತುಕುಡಿಯಲ್ಲಿ ಜಯರಾಜ್‌ ಮತ್ತು ಅವರ ಮಗ ಬೆನಿಕ್ಸ್ ಅವರನ್ನು ಪೊಲೀಸರು ಕೊಂದಿರುವ ಘಟನೆ ದೇಶದಲ್ಲಿ ನಡೆದ ಇಂತಹ ಸಾವಿರಾರು ಪ್ರಕರಣಗಳ ಲ್ಲೊಂದು ಎಂದು ಭಾವಿಸಕೂಡದು. ಚಿತ್ರಹಿಂಸೆ ವಿರೋಧಿ ಕಾನೂನು ಜಾರಿಯಾದರೆ ಮಾತ್ರ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯ’ ಎಂದು ಕಾನೂನು ತಜ್ಞರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಆರ್. ಶ್ರೀಕುಮಾರ್, ಅಜಯ್ ಕುಮಾರ್ ಸಿಂಗ್, ಎಸ್.ಟಿ.ರಮೇಶ್, ಆರ್.ಕೆ. ದತ್ತ, ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ.

‘ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ ಸಂಘಟನೆಯ ಆಗ್ರಹದಂತೆ ಚಿತ್ರಹಿಂಸೆ ವಿರೋಧಿ ಕಾನೂನು ಜಾರಿಗೆ ತಂದರೆ ಮಾತ್ರವೇ ಭಾರತವು ವಿಶ್ವಸಂಸ್ಥೆಯ ‘ಹಿಂಸೆ ವಿರೋಧಿ ಒಡಂಬಡಿಕೆ’ಗೆ ತಡವಾಗಿಯಾದರೂ ತನ್ನ ಬದ್ಧತೆ ತೋರಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ತೂತ್ತುಕುಡಿ ಠಾಣೆಯ ಮಹಿಳಾ ಹೆಡ್ ಕಾನ್‌ಸ್ಟೆಬಲ್‌ ಒಬ್ಬರು ಧೈರ್ಯದಿಂದ ಸಾಕ್ಷಿ ನುಡಿದಿದ್ದಾರೆ. ಇಲಾಖೆಯಲ್ಲಿ ಅವರಂತಹ ದಕ್ಷ ಅಧಿಕಾರಿಗಳು ಇದ್ದಾರೆ ಎನ್ನುವುದು ಸಮಾಧಾನದ ವಿಷಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದು ಉತ್ತಮ ಬೆಳವಣಿಗೆ. ಇನ್ನು ಮುಂದೆ ಇಂತಹ ಪ್ರಸಂಗಗಳು ನಡೆಯದಂತೆ ಕ್ರಮ ಕೈಗೊಳ್ಳಲೇಬೇಕಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT