ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಸ್ಥಾನಗಳಿಗೆ ಸರ್ಕಾರ ನೀಡುವ ತಸ್ತೀಕ್ ಮೊತ್ತ ₹12 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

Published : 19 ಅಕ್ಟೋಬರ್ 2023, 14:33 IST
Last Updated : 19 ಅಕ್ಟೋಬರ್ 2023, 14:33 IST
ಫಾಲೋ ಮಾಡಿ
Comments

ಬೆಂಗಳೂರು: ದೇವಸ್ಥಾನಗಳಿಗೆ ಸರ್ಕಾರ ನೀಡುವ ತಸ್ತೀಕ್‌ ಮೊತ್ತವನ್ನು ₹12 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಒತ್ತಾಯಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ, ‘ರಾಜ್ಯದಲ್ಲಿ 35 ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿವೆ. ಇದರಲ್ಲಿ 34,500ಕ್ಕೂ ಹೆಚ್ಚು ಸಿ ವರ್ಗದ ದೇವಸ್ಥಾನಗಳು ಗ್ರಾಮೀಣ ಪ್ರದೇಶದಲ್ಲಿವೆ. ಈ ದೇವಾಲಯಗಳಿಗೆ ಸರ್ಕಾರ ಪೂಜಾ ಸಾಮಗ್ರಿಗಳ ಖರೀದಿಗೆ ಮಾತ್ರ ₹5 ಸಾವಿರ ತಸ್ತೀಕ್‌ ಮೊತ್ತ ನೀಡುತ್ತಿದೆ.ಇವರಿಗೆ ಯಾವುದೇ ಸೌಲಭ್ಯಗಳಿಲ್ಲ. ಆದ್ದರಿಂದ, ಇಲ್ಲಿನ ಅರ್ಚಕರಿಗೆ ಮಾಸಿಕ ₹10 ಸಾವಿರ ಗೌರವ ಧನ ನೀಡಬೇಕು’ ಎಂದು ಆಗ್ರಹಿಸಿದರು.

‘ಸಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡುವ 65 ವರ್ಷದ ದಾಟಿದ ಅರ್ಚಕರಿಗೆ ₹5 ಸಾವಿರ ಗೌರವಧನ ನೀಡಬೇಕು. ಅರ್ಚಕರಿಗೆ ಅನುಕೂಲವಾಗುವಂತೆ ದೇವಸ್ಥಾನದ ಆವರಣದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲು ಅನುದಾನ ನೀಡಬೇಕು. ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕು. ಒತ್ತುವರಿ ಮಾಡಿರುವ ಮುಜರಾಯಿ ದೇವಸ್ಥಾನಗಳ ಜಮೀನು ತೆರವುಗೊಳಿಸಬೇಕು. ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅರ್ಚಕರ ಭವನ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು. 

‘ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್‌ಗಳಿಗೆ 7 ಆಗಮಗಳ ಅರ್ಹ ಸದಸ್ಯರನ್ನು ನೇಮಿಸಬೇಕು. ರಾಜ್ಯದ ಎ ಮತ್ತು ಬಿ ವರ್ಗಗಳ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಜೊತೆಗೆ 6ನೇ ವೇತನ ಆಯೋಗ ಜಾರಿಗೊಳಿಸಬೇಕು ಮತ್ತು ಮಧ್ಯಂತರ ಪರಿಹಾರ ನಿಧಿಯನ್ನು ನೀಡಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT