ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಮು ರೈಲು ಸಂಚಾರ ಆರಂಭ: ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ಸಾಕಾರ

ಹೊಸ ಹಾಲ್ಟ್ ಸ್ಟೇಷನ್‌ಗೆ ಚಾಲನೆ
Last Updated 4 ಜನವರಿ 2021, 5:40 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣದ ಕನಸು ಸೋಮವಾರ ಸಾಕಾರಗೊಂಡಿದೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಡೆಮು ರೈಲು ಸಂಚಾರ ಆರಂಭವಾಗಿದೆ.

ಕೆಎಸ್‌ಆರ್ ರೈಲು ನಿಲ್ದಾಣದಿಂದ ಹೊರಟ ಡೆಮು ರೈಲು, ವಿಮಾನ ನಿಲ್ದಾಣ ಬಳಿಯ ಹಾಲ್ಟ್ ಸ್ಟೇಷನ್‌ಗೆ ಬೆಳಿಗ್ಗೆ 6.02ಕ್ಕೆ ತಲುಪಿತು. ಆ ಮೂಲಕ ಹೊಸ ಹಾಲ್ಟ್ ಸ್ಟೇಷನ್‌ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು.

ಇದೇ ರೈಲಿನಲ್ಲಿಸಂಸದ ಪಿ.ಸಿ. ಮೋಹನ್ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರಯಾಣಿಸಿದರು. ಹಾಲ್ಟ್ ಸ್ಟೇಷನ್‌ನಿಂದ ವಿಮಾನ ನಿಲ್ದಾಣಕ್ಕೆ 3 ಕಿಲೋ ಮೀಟರ್ ದೂರವಿದ್ದು, ಅಲ್ಲಿಗೆ ಹೋಗಲು ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ರೈಲಿನಲ್ಲಿ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು ಸಂತಸಪಟ್ಟರು.

ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್, ಕಾಫಿ ಶಾಪ್ ಸೇರಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡು ಸುಸಜ್ಜಿತ ರೈಲು ನಿಲ್ದಾಣ ಇದಾಗಿದೆ.

‘ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಸದ್ಯ ಪ್ರತಿದಿನ 5 ರೈಲುಗಳು ಸಂಚರಿಸಲಿವೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಚರಣೆ ಮಾಡಲಿವೆ. ಕೆಎಸ್‌ಆರ್‌ ರೈಲು ನಿಲ್ದಾಣದಿಂದ ₹10 ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ₹15 ದರದಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಜನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ ಎಂದಿದ್ದಾರೆ.

‘ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದೆ ವಿಮಾನ ನಿಲ್ದಾಣಕ್ಕೆ ತಲುಪಲು ಅತ್ಯಂತ ಸುಲಭದ ಮಾರ್ಗ ಇದು. ವಿಮಾನ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ಅನುಕೂಲವಾಗಲಿದೆ’ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT