ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜ ವಿಭಜಿಸುವ ಪಟ್ಟಭದ್ರರ ದೂರವಿಡಿ: ಸಿದ್ದರಾಮಯ್ಯ

Published 9 ನವೆಂಬರ್ 2023, 15:26 IST
Last Updated 9 ನವೆಂಬರ್ 2023, 15:26 IST
ಅಕ್ಷರ ಗಾತ್ರ

ಬೆಂಗಳೂರು: ಜಾತಿ-ಧರ್ಮದ ಹೆಸರಿನಲ್ಲಿ ಸಮಾಜ ವಿಭಜಿಸುವ ಪಟ್ಟಭದ್ರರನ್ನು ದೂರ ಇಡಬೇಕು. ಸಾಮಾಜಿಕ ನ್ಯಾಯದ ವಿರೋಧಿಗಳಾದ ಅವರು ಶೂದ್ರ ಸಮುದಾಯದ ಆರ್ಥಿಕ, ಶೈಕ್ಷಣಿಕ ಪ್ರಗತಿ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾರ್ಮಿಕ ಇಲಾಖೆ ಗುರುವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ದೊರೆಯದೇ ಶೂದ್ರರು ಹಾಗೂ ಮಹಿಳೆಯರು ಶತಮಾನಗಳಿಂದ ಹಿಂದುಳಿದಿದ್ದಾರೆ. ಅಸಮಾನತೆ ಹೋಗಲಾಡಿಸಲು, ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಸಿಗಬೇಕು ಎಂದರು.

ರೈತ ಸಮುದಾಯ ಹೊರತುಪಡಿಸಿದರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕರು. ಶೇ 83 ರಷ್ಟು ಕಾರ್ಮಿಕರು ಇಂದಿಗೂ ಅಸಂಘಟಿತರಾಗಿದ್ದಾರೆ. 9.60 ಲಕ್ಷ ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಸೌಲಭ್ಯಗಳ ಉಪಯೋಗ ಪಡೆದು ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಸಲಹೆ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೋವಿಡ್ ಸಮಯದಲ್ಲಿ ಕಾರ್ಮಿಕರು ಊರಿಗೆ ಹಿಂದಿರುಗುತ್ತಿದ್ದಾಗ ಸರ್ಕಾರ ಮೂರುಪಟ್ಟು ಟಿಕೆಟ್ ದರ ಹಣ ನಿಗದಿ ಮಾಡಿತ್ತು. ವಿಷಯ ಗಮನಕ್ಕೆ ಬಂದ ತಕ್ಷಣ ₹1 ಕೋಟಿ ನೀಡಿ, ಒಂದು ವಾರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್‌ ವ್ಯವಸ್ಥೆ ಮಾಡಿತ್ತು ಎಂದರು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಕಳೆದ ಐದು ವರ್ಷಗಳಲ್ಲಿ 40 ಲಕ್ಷ ಕಾರ್ಮಿಕರ ಕಾರ್ಡ್‌ ನೀಡಲಾಗಿದೆ. ಶೇ 60ರಷ್ಟು  ನಕಲಿಯಾಗಿವೆ. ನಕಲಿ ಕಾರ್ಡ್‌ ತಡೆಗೆ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ 13 ಲಕ್ಷ ಹೊಸ ಅರ್ಜಿಗಳು ಬಂದಿವೆ. ಅರ್ಹರಿಗೆ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಆಹಾರ ಸಚಿವ  ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT